ರಾಷ್ಟ್ರೀಯ ಸುದ್ದಿ

ಏಷ್ಯಾದ ಅತಿದೊಡ್ಡ ಸ್ಲಂನಲ್ಲಿ ಕೊರೊನಾ ನಿಯಂತ್ರಣದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ 180 ಮೌಲವಿಗಳು

ಅಝಾನ್ ಕರೆಯ ನಂತರ ಧ್ವನಿ ವರ್ಧಕಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ಸಂದೇಶ

ಮುಂಬೈಯ ಧಾರಾವಿ ಸ್ಲಂನಲ್ಲಿ ಕೊರೊನಾ ನಿಯಂತ್ರಣದಲ್ಲಿ ಕೈಜೋಡಿಸಿದ ಧರ್ಮಗುರುಗಳು

ವರದಿಗಾರ (ಅ.6):ಧರ್ಮಗುರುಗಳು ಸಮುದಾಯದ ನೇತೃತ್ವ ವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ ಎಂತಹ ಸಮಸ್ಯೆಯನ್ನೂ ಪರಿಹರಿಸಬಹುದು ಎಂಬುದಕ್ಕೆ ಮಹಾರಾಷ್ಟ್ರದ ಧಾರಾವಿ ಕೊಳಗೇರಿಯಲ್ಲಿ ಕೊರೊನಾ ನಿಯಂತ್ರಿಸಿದ ಘಟನೆ ಸೂಕ್ತ ನಿದರ್ಶನವಾಗಿದೆ.
ಏಷ್ಯಾದಲ್ಲೇ ಅತಿ ದೊಡ್ಡ ಸ್ಲಂ ಎಂಬ ಹೆಸರಿಗೆ ಪಾತ್ರವಾಗಿರುವ ಮುಂಬೈಯ ಧಾರಾವಿಯಲ್ಲಿ ಹಬ್ಬಿದ್ದ ಕೊರೊನಾ ಸೋಂಕು ಭಾರತ ಮಾತ್ರವಲ್ಲ ಜಗತ್ತಿನ ಆತಂಕಕ್ಕೆ ಕಾರಣವಾಗಿತ್ತು. ಅತಿಹೆಚ್ಚಿನ ಜನಸಾಂಧ್ರತೆ ಇರುವ ಈ ಪ್ರದೇಶದಲ್ಲಿ ಕೊರನಾ ಕೈಮೀರಿ ಹರಡಿದಾಗ ಮಹಾರಾಷ್ಟ್ರ ಸರ್ಕಾರ ಮತ್ತು ಸ್ಥಳೀಯ ಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಸರ್ಕಾರದೊಂದಿಗೆ ಸ್ಥಳೀಯ ಧಾರ್ಮಿಕ ಗುರುಗಳು ಕೈಜೋಡಿಸಿದ್ದರಿಂದ ಇಂದು ಅಲ್ಲಿ ಕೊರೊನಾ ತಹಬದಿಗೆ ಬಂದಿದೆ.

ಧಾರಾವಿ ಸ್ಲಂನಲ್ಲಿ ಕೊರೊನಾ ನಿಯಂತ್ರಿಸುವಲ್ಲಿ 500ಕ್ಕೂ ಮಸೀದಿಗಳ 180 ಮೌಲವಿಗಳು ಮತ್ತು ಮೌಲಾನಾಗಳು ಮಹತ್ವದ ಪಾತ್ರ ವಹಿಸಿದ್ದು, ಅವರ ಈ ಪ್ರಯತ್ನಕ್ಕೆ ಸರ್ಕಾರ ಸೇರಿದಂತೆ ಎಲ್ಲಾ ವರ್ಗಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಮಸೀದಿಯ ಧ್ವನಿವರ್ಧಕದಲ್ಲಿ ಕರೆ ನೀಡುವ ಸಂಜೆಯ ಪ್ರಾರ್ಥನೆಯ ಆಜಾನ್ ಕರೆಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ದೇಶದ ಹಿತದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಇದನ್ನು ಉಲ್ಲಂಘಿಸಿದರೆ ಸಾಮಾಜಿಕ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಸಿದ ಪರಿಣಾಮ ಇಂದು ಧಾರಾವಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಅನುಸರಿಸಿದ ” ಸೋಂಕು ಪತ್ತೆಹಚ್ಚುವಿಕೆ, ಪರೀಕ್ಷೆ ಮತ್ತು ಚಿಕಿತ್ಸೆ ನೀಡು” ಎಂಬ ಯೋಜನೆ ಯಶಸ್ವಿಗೆ ಅಲ್ಲಿನ ಸಮುದಾಯದ ಸಹಕಾರ ಪ್ರಮುಖ ಪಾತ್ರವಹಿಸಿದೆ. ವಿಶೇಷವಾಗಿ 180 ಮೌಲವಿಗಳು ಮತ್ತು ಮೌಲಾನಗಳು ಮಾಡಿದ ಪ್ರಯತ್ನದಿಂದ ಇಂದು ಧಾರಾವಿ ಸಹಜಸ್ಥಿತಿಯತ್ತ ಮರಳುತ್ತಿದೆ.

ಏಷ್ಯಾದ ಅತಿದೊಡ್ಡ ಕೊಳೆಗೇರಿಯಾಗಿರುವ ಧಾರಾವಿಯಲ್ಲಿ 6.5 ಲಕ್ಷ ಜನರು 2.5 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದಾರೆ. ಸಮುದಾಯದ ನಾಯಕರು ಜಾಗೃತಿ ಮೂಡಿಸುವಲ್ಲಿ ಮತ್ತು ಅಧಿಕಾರಿಗಳ ನಿರ್ದೇಶನಗಳನ್ನು ಅನುಸರಿಸಲು ನಿವಾಸಿಗಳನ್ನು ಮನವೊಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಧಾರಾವಿ ಜನಸಂಖ್ಯೆಯ ಶೇಕಡಾ 30 ರಷ್ಟು ಮುಸ್ಲಿಮರಾಗಿದ್ದಾರೆ.

ಏಪ್ರಿಲ್ 1 ರಂದು ಲೇಬರ್ ಕ್ಯಾಂಪ್ ನಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾದ ನಂತರ ಅಲ್ಲಿನ ಮೌಲವಿಗಳು ಮತ್ತು ಮೌಲಾನಾಗಳು ಮತ್ತು ಯುವ ಸ್ವಯಂಸೇವಕರ ಸಹಾಯದಿಂದ ಭಮ್ಲಾ ಫೌಂಡೇಶನ್‌ ಎಂಬ ಎನ್ ಜಿಒಸದಸ್ಯರು ಜಾಗೃತಿ ಮೂಡಿಸುವಲ್ಲಿ ತೊಡಗಿಸಿಕೊಂಡರು. ಇದರ ಫಲವಾಗಿ ಇಂದು ಕೊರನಾ ನಿಯಂತ್ರಣದಲ್ಲಿದೆ ಎಂದು ಫೌಂಡೇಶನ್ ನ ಮುಖ್ಯಸ್ಥ ಮೆರಾಜ್ ಹುಸೈನ್ ಹೇಳುತ್ತಾರೆ.

ರಂಜಾನ್, ಈದ್ ಮತ್ತು ಬರಾಅತ್ ಸಮಯದಲ್ಲಿ ಅಲ್ಲಿನ ನಿವಾಸಿಗಳು ಮನೆಯಿಂದ ಹೊರಗೆ ಬಾರದಂತೆ ತಡೆಯುವಲ್ಲಿ ಧರ್ಮಗುರುಗಳ ಪಾತ್ರ ಕೈಗೂಡಿತು. ಧರ್ಮಗುರುಗಳ ಆದೇಶವನ್ನು ಹೆಚ್ಚಿನ ಜನರು ಪಾಲಿಸುತ್ತಾರೆ ಎಂದು ಭಮ್ಲಾ ಫೌಂಡೇಶನ್‌ನ ಸಂಸ್ಥಾಪಕ ಆಸಿಫ್ ಭಮ್ಲಾ ಹೇಳಿದ್ದಾರೆ.
ದೇವರನ್ನು ಭಯಪಡಿಸಿ, ಸರ್ಕಾರದ ಲಾಕ್ ಡೌನ್ ನಿರ್ದೇಶನ ಮತ್ತು ಕೊರೊನಾ ಶಿಷ್ಟಾಚಾರವನ್ನು ಪಾಲಿಸಿ ಎಂದು ಮಸೀದಿಯ ಧ್ವನಿ ವರ್ಧಕದ ಮೂಲಕ ಅಜಾನ್ ನಂತರ ಪ್ರತಿದಿನ ಜನರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಧಾರಾವಿಯ ಜಾಮಿಯಾ ಮಸೀದಿಯ ಧರ್ಮಗುರು ಮೌಲಾನಾ ಫಾರೂಕಿ ಶೇಕ್ ತಿಳಿಸಿದ್ದಾರೆ ಎಂದು ”ಮುಂಬೈ ಮಿರರ್” ವರದಿ ಮಾಡಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group