ರಾಷ್ಟ್ರೀಯ ಸುದ್ದಿ

ಹತ್ರಾಸ್ ಘಟನೆ: ಚಂದ್ರಶೇಖರ್ ಆಜಾದ್ ಸೇರಿ 680 ಜನರ ವಿರುದ್ಧ ಎಫ್ಐಆರ್; ದೇಶದ್ರೋಹ, ಕ್ರಿಮಿನಲ್ ಸಂಚು ಆರೋಪದಲ್ಲಿ ಮೊಕದ್ದಮೆ

ವರದಿಗಾರ (ಅ.6): ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ನಡೆದ ಉತ್ತರ ಪ್ರದೇಶದ ಹತ್ರಾಸ್ ಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿ ಪತ್ರಕರ್ತರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರ ವಿರುದ್ಧ ದೇಶದ್ರೋಹ, ಕ್ರಿಮಿನಲ್ ಸಂಚು, 144 ಸೆಕ್ಷನ್ ಉಲ್ಲಂಘನೆ ಮತ್ತಿತರ ಆರೋಪಗಳಲ್ಲಿ ಅಲ್ಲಿನ ಸರ್ಕಾರ ಎಫ್ ಐಆರ್ ದಾಖಲಿಸಿದೆ.

ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಪತ್ರಕರ್ತ, ಓರ್ವ ರಾಜಕಾರಣಿ ಸೇರಿದಂತೆ ಹಲವು ಅಪರಿಚಿತರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ, ಕ್ರಿಮಿನಲ್ ಸಂಚು, ಗಲಭೆಗೆ ಪಿತೂರಿ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಎಫ್ ಐಆರ್ ದಾಖಲಿಸಿದ್ದಾರೆ.
ಚಾಂದ್ಪಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್ ಐಆರ್ ದಾಖಲಾಗಿದೆ. ಹತ್ರಾಸ್ ನಲ್ಲಿ ಮೂರು ಎಫ್ ಐಆರ್ ದಾಖಲಾಗಿದ್ದು, ಒಟ್ಟು 680 ಜನರನ್ನು ಅದರಲ್ಲಿ ಹೆಸರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಿವಿಧ ಠಾಣೆಯಗಳಲ್ಲಿ ಪ್ರತ್ಯೇಕ ಎಫ್ ಐಆರ್ ದಾಖಲಾಗಿದೆ.

ಮೇಲ್ಜಾತಿಯ ಠಾಕೂರ್ ಸಮುದಾಯದ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ದಲಿತ ಯುವತಿ ಘಟನೆ ನಡೆದ 15 ದಿನಗಳ ನಂತರ ಸೆಪ್ಟೆಂಬರ್ 29ರಂದು ದೆಹಲಿಯಲ್ಲಿ ಸಾವನ್ನಪ್ಪಿದ್ದರು. ಸಂತ್ರಸ್ತೆಯ ಮನೆ ಮತ್ತು ಗ್ರಾಮಕ್ಕೆ ಹೆಚ್ಚಿನ ಜನರು ಬರಬಾರದು ಎಂಬ ಉದ್ದೇಶದಿಂದ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.

ಯುವತಿಯ ಸಾವಿಗೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದು ಎಲ್ಲೆಡೆ ಪ್ರತಿಭಟನೆ ನಡೆದಿದ್ದವು. ಈ ಮಧ್ಯೆ ಉತ್ತರ ಪ್ರದೇಶ ಪೊಲೀಸರು ರಾಜಕಾರಣಿಗಳು ಮತ್ತು ಕಾರ್ಯಕರ್ತರನ್ನು ಸಂತ್ರಸ್ತೆಯ ಮನೆಗೆ ಭೇಟಿ ನೀಡದಂತೆ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ನಾಯಕರು ಎಲ್ಲಾ ಅಡೆತಡೆಗಳನ್ನು ಮೀರಿ ಕೊನೆಗೂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.
ಹತ್ರಾಸ್‌ನಲ್ಲಿನ ಸೆಕ್ಷನ್ 144 ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಮಧ್ಯೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲು ಈ ಪ್ರಕರಣವನ್ನು ದೊಡ್ಡದು ಮಾಡಲಾಗುತ್ತಿದೆ. ಇದರ ಹಿಂದೆ ಪಿತೂರಿ ಇದೆ. ರಾಜ್ಯದಲ್ಲಿ ಜಾತಿ ಸಂಘರ್ಷ ಮತ್ತು ಗಲಭೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group