ವರದಿಗಾರ (ಅ.6): ಬಿಜೆಪಿಯ ಮೂಲಕ ನಡೆಯುತ್ತಿರುವ ಸಿಬಿಐ, ಐಟಿ ದಾಳಿಗೆ ಮತ್ತು ಅವರ ಒತ್ತಡಕ್ಕೆ ಹೆದರುವ ಮಗ ನಾನಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಯಾರಿಗೂ ಕಳಂಕ ತರುವ ಕೆಲಸ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಬಿಐ ದಾಳಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಯಿ ಮುಚ್ಚಿಸಲು ಪ್ರಯತ್ನ ಮಾಡುವವರಿಗೆ ದೇವರು ಒಳ್ಳೆಯದು ಮಾಡಲಿ. ಈ ಉಪ ಚುನಾವಣೆಯಲ್ಲಿ ಇದಕ್ಕೆ ಜನರು ತಕ್ಕ ಉತ್ತರ ಕೊಡಬೇಕು ಹೇಳಿದರು.
2017ರಲ್ಲಿ 22 ಕಡೆ ದಾಳಿ ನಡೆಸಿದರು. 2018, 2019 ರಲ್ಲಿ ಇಡಿ ದಾಳಿ ಮಾಡಿ 47 ದಿನ ತಮ್ಮನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇಟ್ಟಿದ್ದರು. ತಮ್ಮ 30 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ತನಿಖೆ ನಡೆದಿರಲಿಲ್ಲ. ತಪ್ಪು ಮಾಡಿದ್ದರೆ ತಾನೇ ಹೆದರುವುದು. ಅಧಿಕಾರಿಗಳು ತಮಗೆ ಯಾವುದೇ ತೊಂದರೆ ಕೊಡಲಿಲ್ಲ. ಅವರು ಅವರ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.
ಡಿಕೆಶಿ ಮನೆಯಲ್ಲಿ 50, 3 ಕೋಟಿ ಸಿಕ್ಕಿದೆ ಎಂದು ದೃಶ್ಯ ಮಾಧ್ಯಮಗಳಲ್ಲಿ ತೋರಿಸಲಾಗಿದೆ. ಸೀರೆ, ಪಂಚೆ ಎಲ್ಲವನ್ನೂ ಲೆಕ್ಕ ತೆಗೆದುಕೊಳ್ಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಕೆಲವು ನಿಜ ಕೆಲವು ಸುಳ್ಳನ್ನು ತೋರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆ ಘೋಷಣೆಯಾದ ಮೇಲೆ ನಾವು ಎಲ್ಲಾ ರೀತಿಯ ತಯಾರಿ ಮಾಡಿದ್ದೇವೆ. ನಮ್ಮ ಸಿದ್ಧತೆ ನೋಡಿಕೊಂಡು ಈಗ ದಾಳಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು,
ನಾನು ಎಲ್ಲಿಯೂ ಓಡಿಹೋಗುವುಲ್ಲ, ಈ ಎಫ್ ಐಆರ್, ಕೇಸ್ಗಳಿಗೆ ಹೆದರುವುದಿಲ್ಲ. ಪಕ್ಷ ಭೇದ ಜಾತಿಭೇದವಿಲ್ಲದೇ ಜನರು ಬೆಂಬಲ ಸೂಚಿಸಿದ್ದಾರೆ. ಜೈಲಿಂದ ಹೊರಗೆ ಬರುವಾಗ ತಾವು ವಿಕ್ಟರಿ ಚಿಹ್ನೆ ತೋರಿಸಿ ಬಂದಿಲ್ಲ. ನೊಂದು ಬೆಂದು ಕೈಮುಗಿದುಕೊಂಡು ಬಂದಿದ್ದೇನೆ ಎಂದು ತಿರುಗೇಟು ನೀಡಿದರು.
74.93 ಕೋಟಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಶಿವಕುಮಾರ್ ವಿರುದ್ಧ ಎಫ್ ಐಆರ್ ದಾಖಲಿಸಿದೆ. ನಿನ್ನೆಯ ದಾಳಿಯ ವೇಳೆ ಮನೆಯಲ್ಲಿ 57 ಲಕ್ಷ ರೂ.ನಗದು ಮತ್ತು ದಾಖಲೆ ಪತ್ರಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
