ವರದಿಗಾರ-ಮಕ್ಕತುಲ್ ಮುಕ್ರಮ: 2017ರ ಪವಿತ್ರ ಹಜ್ಜ್ ಪ್ರಾರಂಭಗೊಂಡಿದ್ದು, ಮಕ್ಕಾದ ಮರಾಕಿಝುಲ್ ಅಹ್ಯಾ ಸಹಯೋಗದಲ್ಲಿ ಇಂಡಿಯಾ ಫ್ರೆಟರ್ನಿಟಿ ಫಾರಂ ಹಜ್ಜಾಜಿಗಳ ಸೇವೆಗಾಗಿ ಸುಮಾರು 1,200 ಸ್ವಯಂ ಸೇವಕರನ್ನು ತರಬೇತುಗೊಳಿಸಿದ್ದು, ವಿವಿಧ ಪ್ರದೇಶಗಳಿಂದ ಬಂದ ಸ್ವಯಂ ಸೇವಕರು ಮಕ್ಕಾದ ಹೊರವಲಯವಾದ ಮೀನಾ ತಲುಪಿದ್ದಾರೆ.
ಇಂದು ಹಜ್ಜ್ ನ ಪ್ರಮುಖ ಕರ್ಮವಾದ ಅರಫಾ ದಲ್ಲಿ ಸುಮಾರು ನೂರಕ್ಕಿಂತಲೂ ಹೆಚ್ಚು ಅನುಭವಿ ಸ್ವಯಂ ಸೇವಕರು ಹಜ್ಜಾಜಿಗಳಿಗೆ ನೆರವಾಗಿದ್ದಾರೆ .
ಮಕ್ಕಾ, ಅಝೀಝಿಯಾಗಳಲ್ಲಿರುವ ಹಜ್ಜ್ ಯಾತ್ರಾರ್ಥಿಗಳ ವಸತಿ ಪ್ರದೇಶ, ಹಜ್ಜ್ ಮಿಶನ್ ನ ವೈದ್ಯಕೀಯ ಸೌಕರ್ಯ, ಅರಫಾ ದ ಮಶಮೀರ್ ರೈಲು ನಿಲ್ದಾಣ, ಹಲವು ಔಷಧಾಲಯಗಳು ಹಾಗೂ ಮೀನಾದಲ್ಲಿ ಸ್ವಯಂ ಸೇವಕರು ಇದೀಗಾಗಲೇ ಸೇವೆಯನ್ನು ಪ್ರಾರಂಭಿಸಿದ್ದಾರೆ. ಹಜ್ಜ್ ಯಾತ್ರಾರ್ಥಿಗಳು ತಮ್ಮ ಸ್ಥಳಗಳಿಗೆ ತಲುಪಲು ಮತ್ತು ಅಗತ್ಯವಿದ್ದಾಗ ಔಷಧ ಹಾಗೂ ಗಾಲಿ ಕುರ್ಚಿಗಳನ್ನು ಪಡೆಯಲು ನೆರವಾಗಲಿದ್ದಾರೆ. ಸುಲಭ ಹಜ್ಜ್ ನಿರ್ವಹಣೆಗಾಗಿ ಅವರು ಆರೋಗ್ಯ ಹಾಗೂ ಸುರಕ್ಷಣಾ ಸಲಹೆಗಳನ್ನೂ ನೀಡಲಿದ್ದಾರೆ. ಸಂಪೂರ್ಣ ಕಾರ್ಯಾಚರಣೆಗಾಗಿ 5 ತಂಡಗಳಂತೆ ಸ್ವಯಂ ಸೇವಕರನ್ನು ವಿಭಾಗಿಸಲಾಗಿದೆ. ಮಕ್ಕಾ ತಂಡ, ಅರಫಾ ತಂಡ, ಮೀನಾ ವಸತಿ ಸೇವಾ ತಂಡ ಮತ್ತು ಮೀನಾ ದಲ್ಲಿ ಸ್ವಯಂ ಸೇವಕರು ಸೇವೆಗೆಯ್ಯಲಿದ್ದಾರೆ. ಅಲ್ಲದೆ ಸ್ವಯಂ ಸೇವಕರು ಮೀನಾದ ವಿವಿಧ ಆಸ್ಪತ್ರೆ ಮತ್ತು ಔಷಧಾಲಯಗಳಲ್ಲಿ ಸೇವೆಗೆಯ್ಯಲಿದ್ದಾರೆ ಎಂದು ಹೇಳಿದರು.
ಹಜ್ಜ್ ಯಾತ್ರಾರ್ಥಿಗಳ ಮೊದಲ ತಂಡ ಸೌದಿ ಅರೇಬೀಯಾ ತಲುಪುವುದರೊಂದಿಗೆ ಸ್ವಯಂ ಸೇವಕರು ತಮ್ಮ ಸೇವೆಯನ್ನು ಆರಂಭಿಸಿದ್ದಾರೆ ಎಂದು ಐಎಫ್ಎಫ್ ತಿಳಿಸಿದೆ. ಸುಮಾರು 100ಕ್ಕೂ ಹೆಚ್ಚು ಸ್ವಯಂ ಸೇವಕರು ಮಸ್ಜಿದುಲ್ ಹರಂ ಮತ್ತು ಆಝೀಝಿಯಾಗಳಲ್ಲಿ ಸೇವೆಗೆಯ್ಯುತ್ತಿದ್ದಾರೆ.
ಹಜ್ಜ್ ಶಿಬಿರಗಳು: ಹಜ್ಜ್ ಯಾತ್ರಾರ್ಥಿಗಳು ದೇಶವನ್ನು ತೊರಯುವುದಕ್ಕಿಂತ ಮುಂಚೆಯೇ ಅವರಿಗೆ ಮಾರ್ಗದರ್ಶನ ನೀಡುವುದಕ್ಕಾಗಿ ಇಂಡಿಯಾ ಫ್ರೆಟರ್ನಿಟಿ ಫಾರಂ ತಮಿಳುನಾಡು, ಕರ್ನಾಟ ಮತ್ತು ಕೇರಳಗಳಲ್ಲಿ ಹಜ್ಜ್ ಶಿಬಿರಗಳನ್ನು ಏರ್ಪಡಿಸಿದ್ದು, ಈ ಶಿಬಿರಗಳಲ್ಲಿ ಹಜ್ಜ್ ಯಾತ್ರಾರ್ಥಿಗಳಿಗೆ ತಮ್ಮ ಮನೆಯಿಂದ ಇಳಿದು ಹೊರಡುವಲ್ಲಿಂದ ತೊಡಗಿ ಮರಳಿ ಮನೆ ತಲುಪುವ ತನಕದ ಎಲ್ಲಾ ವಿವರಗಳನ್ನು ನೀಡಲಾಗಿದ್ದು, ಶಿಬಿರದಲ್ಲಿ ಹಜ್ಜ್ ನ ಸ್ಪೂರ್ತಿ, ಒಂದರ ನಂತರ ಒಂದರಂತೆ ಹಜ್ಜ್ ಕರ್ಮವನ್ನು ಪೂರ್ತಿಗೊಳಿಸಬೇಕು, ಹೇಗೆ ಆರೋಗ್ಯ ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಮುಂತಾದ ಸಮಗ್ರ ಮಾಹಿತಿಗಳನ್ನು ನೀಡಲಾಗಿದೆ.
ಹಜ್ಜ್ ನಾವಿಗೇಟರ್ ಅ್ಯಪ್: ಮೀನಾ ದಲ್ಲಿ ಹಜ್ಜಾಜಿಗಳು ತಮ್ಮ ವಸತಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಆ್ಯಂಡ್ರಾಯಿಡ್ ಆಧಾರಿತ ಆ್ಯಪ್(ಅಪ್ಲಿಕೇಶನ್) ಅಪ್ಟೇಟೆಡ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಆ್ಯಪ್ ಆಝೀಝಿಯಾ ವಸತಿ ಪ್ರದೇಶ ಮತ್ತು ಮೀನಾದ ವಸತಿ ಪ್ರದೇಶ , ತುರ್ತು ಅಪಘಾತ ಸೇವೆ, ಸಾರ್ವಜನಿಕ ಸಂಪರ್ಕ ಸೇವೆ, ಆಸ್ಪತ್ರೆ, ಜಮರಾತ್ ದಾರಿ, ಮಸೀದಿಗಳು, ಉಪಹಾರ ಗ್ರಹ, ಶೌಚಾಲಯ, ರೈಲು ನಿಲ್ದಾಣವನ್ನು ಸೂಚಿಸುವ ಅತ್ಯಂತ ಉಪಯೋಗಕಾರಿ ಆ್ಯಪ್ ಇದಾಗಿದ್ದು , ಹಾಜಿಗಳಿಗೆ ತಮ್ಮ ಸ್ಥಳಗಳಿಗೆ ಅಥವಾ ವಸತಿ ಕಟ್ಟಡಗಳಿಗೆ ಸುಲಭವಾಗಿ ತಲುಪಲು ನೆರವಾಗಲಿದೆ ಎಂದು ಐಎಫ್ಎಫ್ ತಿಳಿಸಿದೆ.
