ವರದಿಗಾರ (ಅ.4) ದೇಶದ ಸಾಕ್ಷಿಪ್ರಜ್ಞೆಯನ್ನೇ ಬಡಿದೆಬ್ಬಿಸಿದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣ ಇನ್ನೂ ಜನಮಾನಸದಿಂದ ಮಾಸುವ ಮುನ್ನವೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಬಿ.ಎ. ವಿದ್ಯಾರ್ಥಿನಿಯೊಬ್ಬಳ ಮೇಲೆ ಬಿಜೆಪಿ ಮುಖಂಡ ತಲೆಗೆ ಬಂದೂಕು ಇಟ್ಟು ಅತ್ಯಾಚಾರವೆಸಗಿರುವ ಘೋರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶ್ಯಾಮ್ ಪ್ರಕಾಶ್ ದ್ವಿವೇದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಶಿ ಪ್ರಾಂತ್ ಅಥವಾ ವಾರಣಾಸಿ ಘಟಕದ ಬಿಜೆಪಿ ನಾಯಕ ದ್ವಿವೇದಿಯನ್ನು ಬಕ್ಷಿ ಅಣೆಕಟ್ಟು ಬಳಿ ಬಂಧಿಸಲಾಯಿತು. ಇನ್ನೊಬ್ಬ ಆರೋಪಿ ಅನಿಲ್ ದ್ವಿವೇದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮೇಲೆ ಹದಿನೈದು ದಿನಗಳ ಹಿಂದೆ ಶ್ಯಾಮ್ ಪ್ರಕಾಶ್ ದ್ವಿವೇದಿ ಮತ್ತು ಅನಿಲ್ ದ್ವಿವೇದಿ ಅವರು ಬಂದೂಕು ತಲೆಗೆ ಇಟ್ಟು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಬಿ.ಎ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಆರೋಪಿ ತನ್ನನ್ನು ಆತನ ಹೋಟೆಲ್ಗೆ ಕರೆದೊಯ್ದು ತನ್ನ ಸ್ನೇಹಿತನೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ.
ಇದಕ್ಕೂ ಮೊದಲು ಮಾರ್ಚ್ನಲ್ಲಿ ಇಬ್ಬರು ಆರೋಪಿಗಳು ತನ್ನ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದರು ಕುಟುಂಬದವರು ಭಯಭೀತರಾಗಿ ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ ಎಂದೂ ತಿಳಿಸಿದ್ದಾಳೆ. ಕರ್ನಲ್ ಗಂಜ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನೂ ಮಾಡಲಾಗಿದ್ದು, ಆಕೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ದಾಖಲಿಸಿಕೊಳ್ಳಲಾಗಿದೆ. ಮುಖ್ಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ವೈಫಲ್ಯವನ್ನು ಖಂಡಿಸಿ ವಿರೋಧ ಪಕ್ಷಗಳು ಸುಭಾಷ್ ಕ್ರಾಸಿಂಗ್ನಲ್ಲಿ ಬಿಜೆಪಿ ನಾಯಕನ ಪೋಸ್ಟರ್ಗಳನ್ನು ಅಂಟಿಸಿದ್ದರು. ಅನಿಲ್ ದ್ವಿವೇದಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಈ ವಿಷಯದಲ್ಲಿ ಚಾರ್ಜ್ಶೀಟ್ ಅನ್ನು ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಿಟಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಸಿಂಗ್ ತಿಳಿಸಿದ್ದಾರೆ.
