ವರದಿಗಾರ (ಅ.4): ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ಕ್ರಮಕೈಗೊಳ್ಳದೆ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಬಹುಜನ ಸಮಾಜ ಪಾರ್ಟಿ (ಬಿಎಸ್ ಪಿ) ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಮಾಯಾವತಿ, ಜಿಲ್ಲಾಧಿಕಾರಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ, ಆದರೆ ಯುಪಿ ಸರ್ಕಾರವು ಈ ವಿಷಯದ ಬಗ್ಗೆ ಮೌನ ವಹಿಸಿದೆ. ಇದು ದುರದೃಷ್ಟಕರ. ಯುಪಿ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರೂ ಸಹ ವಿವಾದಾತ್ಮಕ ಜಿಲ್ಲಾಧಿಕಾರಿ ಇನ್ನೂ ಅಧಿಕಾರದಲ್ಲಿ ಮುಂದುವರಿದಿರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸುತ್ತಾರೆ ಎಂದು ತಿಳಿಸಿದ್ದಾರೆ.
ನಿನ್ನೆ ಮಾಯಾವತಿ ಅವರು ಹತ್ರಾಸ್ ಘಟನೆಯ ಬಗ್ಗೆ ಸಿಬಿಐ ತನಿಖೆ ಅಥವಾ ಸುಪ್ರೀಂ ಕೋರ್ಟ್ ನಿಗಾದಲ್ಲಿ ತನಿಖೆಗೆ ಒತ್ತಾಯಿಸಿದ್ದರು. ಮಾತ್ರವಲ್ಲ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು.
