ವರದಿಗಾರ (ಅ.3): ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರನ್ನು ತಾವು ಭೇಟಿ ಮಾಡುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಗುರುವಾರ ಹತ್ರಾಸ್ ಗೆ ತೆರಳಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿ ದೆಹಲಿಗೆ ವಾಪಸ್ ಕಳುಹಿಸಿದ್ದರು.
ಸಾಮೂಹಿಕ ಅತ್ಯಾಚಾರಕ್ಕೊಳಗಾದವರ ಕುಟುಂಬವನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರ ನಿಯೋಗ ಶನಿವಾರ ಹತ್ರಾಸ್ಗೆ ತೆರಳುತ್ತಿದೆ. ಜಗತ್ತಿನ ಯಾವುದೇ ಶಕ್ತಿಯು ನಮ್ಮ ನಿಯೋಗವನ್ನು ತಡೆಯಲು ಸಾಧ್ಯವಿಲ್ಲ ಎಂದು ರಾಹುಲ್ ಸವಾಲು ಹಾಕಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯ ಪೊಲೀಸರು ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆ ಮತ್ತು ಅವರ ಕುಟುಂಬವನ್ನು ನಡೆಸಿಕೊಂಡಿರುವ ರೀತಿ ಒಪ್ಪುವಂತಹದ್ದಲ್ಲ. ಅಂತಹ ನಡವಳಿಕೆಯನ್ನು ಯಾವುದೇ ಭಾರತೀಯರು ಒಪ್ಪಿಕೊಳ್ಳಬಾರದು. ಕುಟುಂಬವನ್ನು ಭೇಟಿಯಾಗುವುದನ್ನು ಮತ್ತು ಅವರ ನೋವನ್ನು ಹಂಚಿಕೊಳ್ಳುವುದನ್ನು ವಿಶ್ವದ ಯಾವುದೇ ಶಕ್ತಿಯಿಂದ ತಡೆಯಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಇಂದು ಹೇಳಿದ್ದಾರೆ.
