ಸಂಸದ ಪ್ರತಾಪ ಸಿಂಹಗೆ ಪ್ರಶ್ನೆಗಳ ಸುರಿಮಳೆ
ವರದಿಗಾರ, (ಅ.3): ಅಧಿಕಾರಕ್ಕಾಗಿ ‘ಅಡ್ಡಕಸುಬಿ” ದಾರಿ ಹಿಡಿಯುವ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಅಡ್ಡಾದಿಡ್ಡಿಯಾಗಿ “ನೆರೆ ಉಕ್ಕಿ’ ರಾಜ್ಯದ ಜನತೆಯ ಬದುಕು ಮೂರಾಬಟ್ಟೆ ಆಗುತ್ತದೆ. ಹೊಲ ಗದ್ದೆ ಮನೆ-ಮಠ ಕಳೆದುಕೊಂಡು ಜನತೆ ಬೀದಿಗೆ ಬೀಳುತ್ತಿದ್ದಾರೆ. ಇದನ್ನು ಕಂಡು ಮಾತೃ ಹೃದಯದ ನಮ್ಮ ನಾಯಕ ಕುಮಾರಸ್ವಾಮಿ ಮರುಗಿ ಕಣ್ಣೀರಿಟ್ಟರೆ ಲೇವಡಿ ಮಾಡುವ ನೀಚ ಮನಸ್ಥಿತಿಯ ಸಂಸದ ಪ್ರತಾಪ ಸಿಂಹ, ಜನರ ಸಂಕಷ್ಟದ ಕಣ್ಣೀರನ್ನೇ ಸೀಮೆಎಣ್ಣೆ ಎಂದುಕೊಂಡು ಬೆಂಕಿ ಹಚ್ಚುವ ಚಾಳಿಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ‘ಹನುಮಂತನೇ ಹಗ್ಗ ಕಡಿಯುವಾಗ ಪೂಜಾರಿ ಶಾವಿಗೆ ಕೇಳಿದನಂತೆ’ ಎಂಬ ಜಾಯಮಾನದವರು ಎಂದು ಜೆಡಿಎಸ್ ನಾಯಕರಾದ ಸಾ.ರಾ. ಮಹೇಶ್, ಸಿ ಎಸ್ .ಪುಟ್ಟರಾಜು ಹಾಗೂ ಶಾಸಕ ಬಿ.ಸಿ. ಗೌರಿಶಂಕರ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸತತ ಎರಡು ವರ್ಷ ರಾಜ್ಯ ನೆರೆಪೀಡಿತವಾಗಿದ್ದು, ಸಂಕಷ್ಟಕ್ಕೆ ಸಿಕ್ಕ ರೈತರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದರೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣಕಾಸು ನೆರವು ಕೇಳಲು ಬಾಯಿಗೆ ಬೆಣೆ ಪಡೆದುಕೊಂಡಿರುವ ಈ ಸಂಸದರು ವೇದಿಕೆ ಸಿಕ್ಕರೆ ನಾಲಿಗೆ ಹರಿಯ ಬಿಡುವುದರಲ್ಲಿ ನಿಸ್ಸೀಮರು ಎಂದು ಜೆಡಿಎಸ್ ನಾಯಕರು ಮಾತಿನ ಚಾಟಿ ಬೀಸಿದ್ದಾರೆ.
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾದ ಕೊಡಗಿನ ಜನರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಲಾ 10.30 ಲಕ್ಷ ರೂಪಾಯಿ ವೆಚ್ಚದಲ್ಲಿ 900 ಮನೆಗಳ ನಿರ್ಮಾಣ ಮಾಡಿಕೊಡಲಾಗಿದೆ. ಸಂತ್ರಸ್ತರಿಗೆ 12 ಲಕ್ಷ ರೂಪಾಯಿಗಳ ನೀಡಲಾಗಿದೆ. ತಾನು ಪ್ರತಿನಿಧಿಸುವ ಕ್ಷೇತ್ರದ ಜನರಿಗೆ ಕಿಂಚಿತ್ತೂ ಸ್ಪಂದಿಸದ ಸಂಸದ ಪ್ರತಾಪ ಸಿಂಹ, ನಳಿನ್ ಕುಮಾರ್ ಕಣ್ಣೀರು ಸುರಿಸುವ, ಒರೆಸುವ ಪ್ರಾಸಬದ್ಧ ಮಾತುಗಳನ್ನು ಉಲಿಯುವ ಮೂಲಕ ಎಲ್ಲವನ್ನೂ ಮರೆಸುವ ಬೀದಿನಾಟಕ ಶುರು ಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಸಂಕಷ್ಟಕ್ಕೆ ಒಳಗಾದ ಕೊಡಗಿನ ಜನರಿಗೆ ‘ಪೇಪರ್ ಸಿಂಹ’ನ ಕೊಡುಗೆ ಏನು? ನೆರೆಹಾವಳಿಯಿಂದ ಸಂತ್ರಸ್ತರಾದ ಜನ ಸೂರಿಲ್ಲದೆ, ಆಸರೆಗಾಗಿ ಕೊರೋನಾ ಸಂಕಷ್ಟದಲ್ಲಿ ಮೊರೆ ಇಡುತ್ತಿರುವಾಗ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಶಿರಾದಲ್ಲಿ ಮತಯಾಚನೆಗೆ ಮುಂದಾಗಿದ್ದೀರಿ ಎಂದು ಸಾರಾ ಮಹೇಶ್, ಪುಟರಾಜು, ಗೌರಿಶಂಕರ್ ಪ್ರಶ್ನಿಸಿದ್ದಾರೆ.
