ವರದಿಗಾರ (ಅ.2): ನೋಟು ಅಮಾನ್ಯೀಕರಣದ ನಾಲ್ಕು ವರ್ಷಗಳ ಬಳಿಕ ಕಳೆದ ವರ್ಷ ವಶಪಡಿಸಿಕೊಂಡ ನಕಲಿ ನೋಟುಗಳಲ್ಲಿ ಅತಿ ಹೆಚ್ಚಿನದ್ದು 2000 ರೂ.ಮುಖಬೆಲೆಯದ್ದಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ (ಎನ್ ಸಿಆರ್ ಬಿ) ತಿಳಿಸಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಶಪಡಿಸಿಕೊಂಡ ನಕಲಿ ನೋಟುಗಳ ಮಾಹಿತಿಯನ್ನು ಪರಿಶೀಲಿಸಿದಾಗ, 2018ಕ್ಕೆ ಹೋಲಿಸಿದರೆ 2019ರಲ್ಲಿ ನಕಲಿ ನೋಟುಗಳ ಸಂಖ್ಯೆ ಏರಿಕೆಯಾಗಿದೆ ಎಂದು ಅದು ತಿಳಿಸಿದೆ.
2019ರಲ್ಲಿ 25.39 ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ, 2018ರಲ್ಲಿ 17.95 ಕೋಟಿ ರೂ.ವಶಪಡಿಸಿಕೊಳ್ಳಲಾಗಿತ್ತು. ಅದಂರೆ 2019ರಲ್ಲಿ ಶೇಕಡಾ 11.7ರಷ್ಟು ಹೆಚ್ಚಳವಾಗಿದೆ.
ದೇಶದಲ್ಲಿ ನಕಲಿ ನೋಟುಗಳು ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸುವ ಉದ್ದೇಶದಿಂದ 2016, ನವೆಂಬರ್ 8ರಂದು ದೇಶದಲ್ಲಿ 500, 1000 ರೂ.ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ರಾತ್ರೋ ರಾತ್ರಿ ಅಮಾನ್ಯಗೊಳಿಸಿತ್ತು.
2,000 ನೋಟು ಹಲವು ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ಸರ್ಕಾರ ಹೇಳಿಕೊಂಡಿತ್ತು. ಎನ್ಸಿಆರ್ಬಿ ಪ್ರಕಾರ, 2019ರಲ್ಲಿ 90,566 ನಕಲಿ 2,000 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು 23,599, ಗುಜರಾತ್ ನಲ್ಲಿ 14,494 ಮತ್ತು ಪಶ್ಚಿಮ ಬಂಗಾಳದಲ್ಲಿ 13,637 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಗಸ್ಟ್ 25 ರಂದು ಬಿಡುಗಡೆಯಾದ 2019-20ರ ರಿಸರ್ವ್ ಬ್ಯಾಂಕ್ (ಆರ್ಬಿಐ) ವಾರ್ಷಿಕ ವರದಿಯಲ್ಲಿ, ಆರ್ಬಿಐ ಮುದ್ರಣಾಲಯಗಳು ಕಳೆದ ಹಣಕಾಸು ವರ್ಷದಲ್ಲಿ ಒಂದೇ ಒಂದು 2,000 ಮುಖಬೆಲೆಯ ನೋಟು ಸಹ ಮುದ್ರಿಸಿಲ್ಲ ಎಂದು ಹೇಳಿದೆ. ಚಲಾವಣೆಯಲ್ಲಿರುವ 2,000 ರೂ.ಮುಖಬೆಲೆಯ ನೋಟುಗಳಲ್ಲಿ ಕುಸಿತ ಕಂಡುಬಂದಿದೆ, 2017-18ರಲ್ಲಿ 3.6 ಬಿಲಿಯನ್ ಇದ್ದ 2000 ರೂ. ನೋಟುಗಳು 2019-20ರಲ್ಲಿ 2.73 ಬಿಲಿಯನ್ ಗೆ ಇಳಿಕೆಯಾಗಿದೆ.
