ರಾಹುಲ್ ಗಾಂಧಿಯನ್ನು ನಡೆಸಿಕೊಂಡ ರೀತಿಗೆ ವ್ಯಾಪಕ ಆಕ್ರೋಶ
ವರದಿಗಾರ (ಅ.2): ಉತ್ತರ ಪ್ರದೇಶ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆಯ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸಂಸದ ರಾಹುಲ್ ಗಾಂಧಿ ಅವರನ್ನು ಹತ್ರಾಸ್ ಗೆ ತೆರಳದಂತೆ ತಡೆ ಒಡ್ಡಿದ ಪೊಲೀಸರು ಅವರಿಬ್ಬರನ್ನೂ ಬಂಧಿಸಿ ನೇರವಾಗಿ ದೆಹಲಿಗೆ ಕಳುಹಿಸಿದ್ದಾರೆ.
ಕಾಂಗ್ರೆಸ್ ನಾಯಕರು ಆಗಮಿಸದಂತೆ ತಡೆಯಲು ಉತ್ತರ ಪ್ರದೇಶ ಪೊಲೀಸರು ಜಿಲ್ಲಾದ್ಯಂತ 144 ಕಲಂನಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಸಂತ್ರಸ್ತೆಯ ಗ್ರಾಮದ ಸುತ್ತ ಭಾರಿ ಪ್ರಮಾಣದ ಬ್ಯಾರಿಕೇಡ್ ಅಳವಡಿಸಿ ಒಳ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದರು.
ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಆಗಮಿಸಿದ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಹತ್ರಾಸ್ ಗೆ ಹೊರಟು ನಿಂತಿದ್ದರು. ಸಂತ್ರಸ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವರಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಪಕ್ಷದ ಕಾರ್ಯಕರ್ತರು ಧರಣಿಗೆ ಮುಂದಾಗಿದ್ದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಸಹ ಹತ್ರಾಸ್ ಗೆ ತೆರಳದಂತೆ ರಸ್ತೆಯಲ್ಲೆ ತಡೆದು ನಿಲ್ಲಿಸಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಈ ಹಂತದಲ್ಲಿ ಪೊಲೀಸರು ಹಾಗೂ ರಾಹುಲ್ ಗಾಂಧಿ ನಡುವೆ ಮಾತುಕತೆ ಚಕಮಕಿ, ತಳ್ಳಾಟ ಉಂಟಾಗಿ ರಾಹುಲ್ ಗಾಂಧಿ ಕೆಳಗೆ ಉರುಳಿಬಿದ್ದ ಘಟನೆಯೂ ನಡೆಯಿತು. ಪೊಲೀಸ್ ಸಿಬ್ಬಂದಿಯೊಬ್ಬರು ರಾಹುಲ್ ಗಾಂಧಿಯನ್ನು ತಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ರಾಹುಲ್ ಪ್ರಿಯಾಂಕಾ ಸೇರಿದಂತೆ ಕೆಲವು ನಾಯಕರನ್ನು ಬಂಧಿಸಿ ಅತಿಥಿ ಗೃಹದಲ್ಲಿರಿಸಲಾಗಿತ್ತು, ಬಳಿಕ ಅವರಿಬ್ಬರನ್ನೂ ದೆಹಲಿಗೆ ಪೊಲೀಸರು ತಲುಪಿಸಿದ್ದಾರೆ.
ಈ ಬೆಳವಣಿಯನ್ನು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ನಾಯಕಿ ಅಖಿಲೇಷ್ ಯಾದವ್ ತೀವ್ರವಾಗಿ ಖಂಡಿಸಿದ್ದು, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೂ ಇಲ್ಲವಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
