ರಾಷ್ಟ್ರೀಯ ಸುದ್ದಿ

ಯೋಗಿ ಆಡಳಿತದ ಉತ್ತರ ಪ್ರದೇಶ ಮಹಿಳೆಯರಿಗೆ ಒಂದು ದುಸ್ವಪ್ನದ ಸ್ಥಳ; ಎಸ್‌.ಡಿ.ಪಿ.ಐ

“ಮುಸ್ಲಿಂ ಮಹಿಳೆಯರನ್ನು ಗೋರಿಗಳಿಂದ ಹೊರತೆಗೆದು ಅತ್ಯಾಚಾರವೆಸಗಿ ಎಂದು ಕರೆ ನೀಡಿದ್ದ ಧರ್ಮಾಂಧತೆ ತುಂಬಿದ ಮನುಷ್ಯನಿಂದ ಯಾವುದೇ ರೀತಿಯ ಮಾನವೀಯತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ”

ವರದಿಗಾರ (ಸೆ.30): ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರ ಗೌರವವನ್ನು ಅಲ್ಲಿ ನಿರ್ಲಕ್ಷಿಸಲಾಗಿದೆ. ಯೋಗಿಯ ಆಳ್ವಿಕೆಯಲ್ಲಿ ಮಹಿಳೆಯರ ವಾಸಕ್ಕೆ ಉತ್ತರ ಪ್ರದೇಶ ಒಂದು ದುಃಸ್ವಪ್ನದ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಅಡ್ವಕೇಟ್ ಶರ್ಫುದ್ದೀನ್ ಅಹ್ಮದ್ ಟೀಕಿಸಿದ್ದಾರೆ.

ಯು.ಪಿ ಯಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದು, ಉತ್ತರ ಪ್ರದೇಶವನ್ನು ಭಾರತದ ಅಪರಾಧಗಳ ರಾಜಧಾನಿಯಾಗಿ ಪರಿವರ್ತಿಸಲಾಗಿದೆ ಎಂದು ಶರ್ಫುದ್ದೀನ್ ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಹರ್ತಾಸ್‌ನಲ್ಲಿ ಕ್ರೂರವಾಗಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 19 ವರ್ಷದ ದಲಿತ ಹುಡುಗಿ ನಿನ್ನೆ ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ಸರಣಿಯಲ್ಲಿ ಇದು ಕೊನೆಯದೂ ಆಗಿರುವುದಿಲ್ಲ. ದಲಿತ ಹುಡುಗಿಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ.

ಹುಡುಗಿಯ ಕತ್ತು ಹಿಸುಕಿ ಅವಳ ನಾಲಿಗೆಯನ್ನು ಕತ್ತರಿಸಲಾಗಿದ್ದು, ಅವಳ ಬೆನ್ನುಮೂಳೆಯನ್ನು ಮುರಿಯಲಾಗಿದೆ. ಹಲ್ಲೆಯಿಂದ ಹಲವೆಡೆ ತೀವ್ರ ಗಾಯಗಳಾಗಿವೆ. ಎರಡು ವಾರಗಳ ಕಾಲ ಜೀವನ್ಮರಣದ ನಡುವೆ ಹೋರಾಡಿದ ಆಕೆ ಕೊನೆಗೂ ನಿನ್ನೆ ದೆಹಲಿಯ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ದಲಿತ ಹುಡುಗಿಯ ಸಾವಿನ 24 ಗಂಟೆ ಕಳೆಯುವ ಮೊದಲೇ, ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ದಲಿತ ಮಹಿಳೆಯ ತೊಡೆಯ ಮೇಲೆ ಬೂಟಿನಿಂದ ತುಳಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದಲ್ಲಿ ಮಾನವೀಯತೆ ಅಕ್ಷರಶಃ ಸತ್ತು ಹೋಗಿದೆ. ಕೇಸರಿ ವಸ್ತ್ರಧಾರಿ ನಿರ್ದಯಿ ಸನ್ಯಾಸಿಯ ಆಳ್ವಿಕೆಯಲ್ಲಿ ಕ್ರೌರ್ಯವೇ ರಾಜ್ಯದ ವಿಶಿಷ್ಟ ಲಕ್ಷಣವಾಗಿದೆ. ಯೋಗಿ ಆದಿತ್ಯನಾಥ್, ರಾಜ್ಯ ಮತ್ತು ದೇಶ ಮಾತ್ರವಲ್ಲ ಸನಾತನ ಧರ್ಮಕ್ಕೂ ಕಳಂಕಿತರಾಗಿದ್ದಾರೆ. ಮುಸ್ಲಿಂ ಮಹಿಳೆಯರನ್ನು ಗೋರಿಗಳಿಂದ ಹೊರತೆಗೆದು ಅತ್ಯಾಚಾರವೆಸಗಿ ಎಂದು ಕರೆ ನೀಡಿದ್ದ ಧರ್ಮಾಂಧತೆ ತುಂಬಿದ ಮನುಷ್ಯನಿಂದ ಯಾವುದೇ ರೀತಿಯ ಮಾನವೀಯತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಜಂಗಲ್ ರಾಜ್ ಎಂಬ ಪದವು ಉತ್ತರ ಪ್ರದೇಶಕ್ಕೆ ಹೆಚ್ಚು ಸೂಕ್ತವೆನಿಸುತ್ತದೆ. ಯಾವುದೇ ನೈತಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು ಅಥವಾ ಮಾನವೀಯತೆಗೆ ಅಲ್ಲಿ ಗೌರವವಿಲ್ಲದಂತಾಗಿದೆ. ಅಲ್ಲಿ ಮನುಷ್ಯರಿಗಿಂತ ಹಸುಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಅತ್ಯಾಚಾರಿಗಳು ಮತ್ತು ಕಿರುಕುಳ ನೀಡುವವರು ಅಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ಅವಮಾನದ ಗಾಯಕ್ಕೆ ಮತ್ತಷ್ಟು ನೋವು ಉಂಟು ಮಾಡುತ್ತಾ, “ಸರ್ವರ್ಣ ಪರಿಷತ್” ಹೆಸರಿನ ತಂಡವು ಹತ್ರಾಸ್ ಅತ್ಯಾಚಾರಿಗಳನ್ನು ಬೆಂಬಲಿಸಿ ಮುನ್ನೆಲೆಗೆ ಬಂದಿದೆ. ಉತ್ತರಪ್ರದೇಶದಲ್ಲಿ ಅಪರಾಧಿಗಳು, ಅತ್ಯಾಚಾರಿಗಳು ಮತ್ತು ಅಪರಾಧಿಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಯೋಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರಿಗೆ ಇನ್ನಷ್ಟು ಧೈರ್ಯ ಬಂದಿದೆ.

ಈ ಕ್ರೂರ ಘಟನೆಯ ದುಃಖಕರ ಮತ್ತು ಬೇಸರದ ಸಂಗತಿಯೆಂದರೆ, ಹತ್ರಾಸ್ ಹುಡುಗಿಯನ್ನು ಹತ್ಯೆ ಮಾಡಿದ ರೀತಿಯಲ್ಲಿಯೇ ಕೊಲೆಯಾದ ನಿರ್ಭಯಳಿಗೆ ನ್ಯಾಯ ಕೋರಿ ಬೀದಿಗಿಳಿದ ದೇಶದ ಸಾಮೂಹಿಕ ಪ್ರಜ್ಞೆಯಿಂದ ಈಗ ಅಂತಹ ಯಾವುದೇ ಆಕ್ರೋಶ ವ್ಯಕ್ತವಾಗಲಿಲ್ಲ. ಅತ್ಯಾಚಾರ ಮತ್ತು ಕಿರುಕುಳಕ್ಕೆ ಬಲಿಯಾದವರನ್ನು ಅವರ ಸ್ಥಾನಮಾನ, ಜಾತಿ ನೋಡಿ ಪರಿಗಣಿಸಲಾಗುತ್ತದೆ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಶರ್ಫುದ್ದೀನ್ ಅಹ್ಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group