ವರದಿಗಾರ (ಸೆ.30): ಮೇಲ್ವರ್ಗದ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಹತ್ಯೆ ಮಾಡಿದ ಉತ್ತರ ಪ್ರದೇಶದ ಹತ್ರಾಸ್ ನ 19 ವರ್ಷದ ದಲಿತ ಯುವತಿಯ ಮೃತದೇಹವನ್ನು ಪೊಲೀಸರು ಬುಧವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸರು ಬಲವಂತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಗಳ ಪಾರ್ಥೀರ ಶರೀರವನ್ನು ಕೊನೆಯ ಬಾರಿಗೆ ಮನೆಗೆ ತರಬೇಕೆಂಬ ಮನೆಯವರ ಆಸೆಯನ್ನು ಈಡೇರಿಸಲು ಪೊಲೀಸರು ಅವಕಾಶ ನೀಡಲಿಲ್ಲ.
“ನನ್ನ ತಂಗಿಯ ಮೃತದೇಹದ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ತೋರುತ್ತದೆ; ಪೊಲೀಸರು ನಮಗೆ ಏನನ್ನೂ ಹೇಳುತ್ತಿಲ್ಲ. ಕೊನೆಯ ಬಾರಿಗೆ ಆಕೆಯ ಶವವನ್ನು ಮನೆಯೊಳಗೆ ತರಲು ನಮಗೆ ಅವಕಾಶ ಮಾಡಿಕೊಡಬೇಕೆಂದು ನಾವು ಅವರನ್ನು ಬೇಡಿಕೊಂಡೆವು, ಆದರೆ ಅವರು ನಮ್ಮ ಮಾತನ್ನು ಕೇಳಲಿಲ್ಲ ”ಎಂದು ಮೃತರ ಸಹೋದರ ತಿಳಿಸಿದ್ದಾನೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ತಾಯಿಗೆ ಸಹಾಯ ಮಾಡಲು ಗದ್ದೆಗೆ ತೆರಳಿದ್ದ ದಲಿತ ಯುವತಿಯನ್ನು ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿ ಕ್ರೂರವಾಗಿ ಥಳಿಸಿ, ನಾಲಗೆ ಕತ್ತರಿಸಿದ್ದರು. ಬಳಿಕ ಎರಡು ವಾರಗಳ ಕಾಲ ಉತ್ತರ ಪ್ರದೇಶದ ಅಲಿಘಡ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆಕೆಯನ್ನು ಕೊನೆಗೆ ಎರಡು ದಿನಗಳ ಹಿಂದೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅಲ್ಲಿ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದರು.
ಯುವತಿಯ ಹತ್ಯೆಯನ್ನು ಖಂಡಿಸಿ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ದೆಹಲಿ, ಉತ್ತರ ಪ್ರದೇಶದಲ್ಲಿ ಕಳೆದ ರಾತ್ರಿ ನೂರಾರು ಯುವಕರು, ಯುವತಿಯರು ಬೀದಿಗಳಿದು ಘಟನೆಯನ್ನು ಖಂಡಿಸಿದ್ದಾರೆ. ಇಂದು ಕೂಡ ಹಲವೆಡೆ ಪ್ರತಿಭಟನೆ ಆಯೋಜಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿಯೂ ದಲಿತ ಯುವತಿಗೆ ನ್ಯಾಯ ದೊರಕಿಸಿ ಕೊಡುವಂತೆ ಅಭಿಯಾನ ಆರಂಭಿಸಲಾಗಿದೆ.
