ವರದಿಗಾರ (ಸೆ.29): ಕುವೈತ್ ನ ಅಮೀರ್, ಶೇಖ್ ಸಬಾಹ್ ಅಲ್ ಅಹ್ಮದ್ ಇಂದು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು ಎಂದು ಅಮೀರಿ ದಿವಾನ್ ನ ಡೆಪ್ಯುಟಿ ಮಿನಿಸ್ಟರ್ ಶೇಖ್ ಅಲಿ ಅಲ್ ಜರ್ರಾಹ್ ಅಲ್ ಸಬಾ ತಿಳಿಸಿದ್ದಾರೆ ಎಂದು ಕುವೈತ್ ಟಿವಿ ವರದಿ ಮಾಡಿದೆ.
ಶೇಖ್ ಸಬಾಹ್ 2006 ರಿಂದ ಕುವೈತ್ ಅನ್ನು ಆಳುತ್ತಿದ್ದರು. 50 ವರ್ಷಗಳಿಗೂ ಹೆಚ್ಚು ಕಾಲ ವಿದೇಶಾಂಗ ನೀತಿಯನ್ನು ಮುನ್ನಡೆಸಿದ್ದರು. ಅವರ ಉತ್ತರಾಧಿಕಾರಿಯಾಗಿ ಅವರ ಸಹೋದರ, ರಾಜಕುಮಾರ ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಸಬಾ. ಅವರನ್ನು ಈಗಾಗಲೇ ನಿಯೋಜಿಸಲಾಗಿದೆ.
ವೈದ್ಯಕೀಯ ತಪಾಸಣೆಗಾಗಿ ಜುಲೈ 18 ರಂದು ಅಮೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ದಿನದ ನಂತರ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಜುಲೈ 23 ರಂದು, ಅಮೀರ್ ಅವರನ್ನು ಅಮೆರಿಕಕ್ಕೆ ಕರೆದೊಯ್ಯಲಾಯಿತು. ಆದರೆ ಅಮೆರಿಕದಲ್ಲಿ ಯಾವ ಚಿಕಿತ್ಸೆ ನೀಡಲಾಯಿತು ಎಂಬುದನ್ನು ಅಮೀರ್ ಅವರ ಕಚೇರಿ ಬಹಿರಂಗಪಡಿಸಿಲ್ಲ.
ಶೇಖ್ ಸಬಾ ಅಲ್ ಅಹ್ಮದ್ ಅವರ ಗೌರವಾರ್ಥ ಮೂರು ದಿನಗಳ ಶೋಕಾಚರಣೆ ಮತ್ತು ಧ್ವಜಗಳನ್ನು ಅರ್ಧದವರೆಗೆ ಹಾರಿಸಲು ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯದ್ ಅಲ್ ನಹ್ಯಾನ್ ಸೂಚಿಸಿದ್ದಾರೆ.
ಅಮೀರ್ ಅವರ ನಿಧನಕ್ಕೆ ಅಬುಧಾಬಿಯ ಯುವರಾಜ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಮುಖ್ಯಸ್ಥ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಟ್ವಿಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
