ವರದಿಗಾರ (ಸೆ.29): ಉದ್ದೇಶಪೂರ್ವಕವಾಗಿ ಐಸಿಸ್ಗೆ ಸೇರ್ಪಡೆಗೊಂಡಿದ್ದ ಮತ್ತು ನಂತರ ಭಯೋತ್ಪಾದಕ ಚಟುವಟಿಕೆ ಮುಂದುವರೆಸಲು ಇರಾಕ್ಗೆ ತೆರಳಿದ್ದ ಕೇರಳದ ವ್ಯಕ್ತಿಗೆ ಸೋಮವಾರ ಎನ್ ಐಎ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಸುಬಹಾನಿ ಹಾಜ ಮೊಯ್ದೀನ್ ಶಿಕ್ಷೆಗೊಳಗಾದ ಕೇರಳಿಗ. ಈತನನ್ನು ಎನ್ಐಎ ಮತ್ತು ರಾಜ್ಯ ಪೊಲೀಸರು ತಮಿಳುನಾಡಿನಲ್ಲಿ 2016 ರಲ್ಲಿ ಬಂಧಿಸಿದ್ದರು. ಜೀವಾವಧಿ ಶಿಕ್ಷೆಯ ಜೊತೆ 2,10,000 ರೂ. ದಂಡವನ್ನೂ ವಿಧಿಸಲಾಗಿದೆ.
ಮೊಯ್ದೀನ್ (35)ನನ್ನು ಎನ್ಐಎ ನ್ಯಾಯಾಲಯ 120 ಬಿ ಮತ್ತು 125 ಐಪಿಸಿ ಮತ್ತು ಯುಎ (ಪಿ) ಕಾಯ್ದೆಯ ಸೆಕ್ಷನ್ 20, 38 ಮತ್ತು 39 ರ ಅಡಿಯಲ್ಲಿ ಶಿಕ್ಷೆಗೊಳಪಡಿಸಿದೆ.
ಕೆಲ ಯುವಕರು ಪಿತೂರಿ ನಡೆಸುತ್ತಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಐಎಸ್ಐಎಸ್) ಸಂಘಟನೆಯ ಚಟುವಟಿಕೆಗಳನ್ನು ಭಾರತದಲ್ಲಿ ಮತ್ತಷ್ಟು ಹೆಚ್ಚಿಸಿ, ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾನೆ ಎಂಬ ಮಾಹಿತಿ ಆಧಾರದ ಮೇಲೆ 2016ರ ಅ.1 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಕರಣ ದಾಖಲಿಸಿತ್ತು.
ಅದರಂತೆ, 2016ರ ಅ 3ರಂದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮೊಯ್ದೀನ್ ಮನೆಯಲ್ಲಿ ಶೋಧ ನಡೆಸಲಾಗಿತ್ತು. ಮನೆಯಿಂದ ಮಾಹಿತಿ ಒಳಗೊಂಡ ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸಂಘರ್ಷ ಪೀಡಿತ ಪಶ್ಚಿಮ ಏಷ್ಯಾಕ್ಕೆ ಈತ ಹೋಗಿ ಬಂದಿರುವುದು ಇದರಿಂದ ಗೊತ್ತಾಗಿತ್ತು. 2016ರರ ಅ 5 ರಂದು ಮೊಯ್ದೀನ್ ನನ್ನು ಬಂಧಿಸಲಾಗಿತ್ತು.
ಈತ ಇರಾಕ್ನ ಯುದ್ಧ ವಲಯದಲ್ಲಿದ್ದ ಎಂಬುದು ಇಸ್ಲಾಮಿಕ್ ಸ್ಟೇಟ್ ಸಂಘಟನೆಯಲ್ಲಿ ಬಳಸಿದ ಬಟ್ಟೆಗಳ ವಿಧಿವಿಜ್ಞಾನ ಪರೀಕ್ಷೆ ಮತ್ತು ಆತನ ದೇಹದ ವಿಧಿವಿಜ್ಞಾನ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತು ಎಂದು ಎನ್ಐಎ ಹೇಳಿದೆ.
2015ರ ಸೆಪ್ಟೆಂಬರ್ ರಂದು ಮೊಯ್ದೀನ್ ಭಾರತಕ್ಕೆ ಮರಳಿದ ನಂತರ, ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ನಿರ್ದೇಶನದಂತೆ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ತಮಿಳುನಾಡಿನ ಶಿವಕಾಸಿಯಿಂದ ಸ್ಫೋಟಕ ರಾಸಾಯನಿಕಗಳನ್ನು ಖರೀದಿಸಲು ಪ್ರಯತ್ನಿಸಿದ್ದಾನೆ ಎಂದು ಎಂದು ಎನ್ಐ ಎ ದೋಷರೋಪ ಪಟ್ಟಿಯಲ್ಲಿ ಹೇಳಿತ್ತು.
