ವರದಿಗಾರ (ಸೆ.28): ‘ಬೆಂಗಳೂರು ಭಯೋತ್ಪಾದಕರ ತಾಣವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಎನ್ ಐಎ ಕಚೇರಿ ಆರಂಭಿಸಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಇದು ಬೆಂಗಳೂರು ಹಾಗೂ ರಾಜ್ಯಕ್ಕೆ ಮಸಿ ಬಳಿಯುವ ಪ್ರಯತ್ನವಾಗಿದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಬೆಂಗಳೂರನ್ನು ಕಟ್ಟಿಲ್ಲ. ನಮ್ಮ ನಾಯಕರ ಪರಿಶ್ರಮದಿಂದ ಬೆಂಗಳೂರು ವಿಶ್ವಮಟ್ಟದ ಶಿಕ್ಷಣ, ಮಾಹಿತಿ ತಂತ್ರಜ್ಞಾನ ತಾಣವಾಗಿದೆ. ಇಲ್ಲಿಂದ ವಿಶ್ವಕ್ಕೆ ಇಂಜಿನಿಯರ್ ಗಳು, ವೈದ್ಯರು ರವಾನೆಯಾಗಿದ್ದಾರೆಯೇ ಹೊರತು ಭಯೋತ್ಪಾದಕರಲ್ಲ. ಶೇ. 34ರಷ್ಟು ಐಟಿ ರಫ್ತು ಬೆಂಗಳೂರಿನಿಂದ ಆಗುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭೂಮಿ ಪೂಜೆಗೆ ಬಂದ ಸಂದರ್ಭದಲ್ಲಿ, ‘ಇಷ್ಟು ದಿನಗಳ ಕಾಲ ವಿಶ್ವ ನಾಯಕರು ಮೊದಲು ದೆಹಲಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮೊದಲು ಬೆಂಗಳೂರಿಗೆ ಬಂದು, ನಂತರ ದೆಹಲಿಗೆ ಹೋಗುತ್ತಿದ್ದಾರೆ’ ಎಂದು ಹೇಳಿದರು.
ಇಡೀ ವಿಶ್ವ ಬೆಂಗಳೂರಿನ ಕಡೆ ನೋಡುತ್ತಿರುವಾಗ ತೇಜಸ್ವಿ ಸೂರ್ಯ ಇಂಥ ಹೇಳಿಕೆ ಮೂಲಕ ರಾಜ್ಯ ಹಾಗೂ ಬೆಂಗಳೂರಿನ ಮಾನ ಹರಾಜು ಹಾಕಿದ್ದಾರೆ. ಈ ಹೇಳಿಕೆ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿರುವವರು ಪ್ರತಿಕ್ರಿಯೆ ನೀಡಬೇಕು. ಇದು ರಾಜ್ಯಕ್ಕೆ, ಕನ್ನಡಿಗರಿಗೆ ಮಾಡಿರುವ ಅಪಮಾನ. ಈ ಹೇಳಿಕೆಯಿಂದ ಕನ್ನಡಿಗರ ಭಾವನೆಗೆ ಧಕ್ಕೆಯಾಗಿದೆ. ಬೆಂಗಳೂರನ್ನು ಹಾಗೂ ರಾಜ್ಯವನ್ನು ಭಯೋತ್ಪಾದಕರ ತಾಣ ಎಂದು ಕರೆಯಲು ಬಿಡುವುದಿಲ್ಲ. ಈ ವಿಚಾರವಾಗಿ ತೇಜಸ್ವಿ ಸೂರ್ಯ ರಾಜ್ಯದ ಜನರ, ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರು ಒತ್ತಾಯಿಸಿದರು.
ಈ ಹೇಳಿಕೆಯ ನಂತರ ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಯಾರು ಮುಂದೆ ಬರುತ್ತಾರೆ? ನಾವು ಅಂತಾರಾಷ್ಟ್ರೀಯ ಕಂಪನಿಗಳನ್ನು ಕರೆಸಿ ಇಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ದೇಶದ ಜನರಿಗೆ ಉದ್ಯೋಗ ಕಲ್ಪಿಸಿದ್ದೇವೆ. ಜಗದೀಶ್ ಶೆಟ್ಟರ್ ಅವರೇ, ನೀವು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಲು ತೀರ್ಮಾನಿಸಿದ್ದೀರಿ. ರಾಜ್ಯದ ಬಗ್ಗೆ ಈ ರೀತಿ ಹೇಳಿಕೆ ಕೊಟ್ಟರೆ ಯಾರು ಬಂದು ಬಂಡವಾಳ ಹೂಡಿಕೆ ಮಾಡುತ್ತಾರೆ?. ರಾಜ್ಯದಲ್ಲಿ ಕೋಮು ಗಲಭೆಗಳು ಇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮು ಗಲಭೆಗಳು ನಡೆಯುತ್ತವೆ. ಈ ಸಮಯದಲ್ಲಿ ರಾಜ್ಯದ ಘನತೆ, ಮರ್ಯಾದೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸಲಾಗುವುದು. ಇದಕ್ಕೆ ನೀವೆಲ್ಲರೂ ಸಜ್ಜಾಗಬೇಕು. ನಾವು ಪ್ರಾಣ ಬೇಕಾದರೆ ಬಿಡುತ್ತೇವೆ, ಸ್ವಾಭಿಮಾನ ಮಾತ್ರ ಬಿಟ್ಟುಕೊಡುವುದಿಲ್ಲ. ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಸಾಯಲೇಬೇಕು. ಹುಟ್ಟು ಉಚಿತ, ಸಾವು ಖಚಿತ. ಈ ಹುಟ್ಟು ಸಾವಿನ ನಡುವೆ ನಮ್ಮ ರಾಜ್ಯದ ರಕ್ಷಣೆ ನಮ್ಮ ಕರ್ತವ್ಯ ಎಂದು ಡಿಕೆಶಿ ಹೇಳಿದರು.
ಸಹಿ ಆಂದೋಲನ: ಮುಂದಿನ ತಿಂಗಳು 10ನೇ ತಾರೀಖಿನಿಂದ 30ನೇ ತಾರೀಖಿನವರೆಗೂ ನಾವು ರೈತ ವಿರೋಧಿ ಕಾಯ್ದೆಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆರಂಭಿಸುತ್ತಿದ್ದು, ರಾಷ್ಟ್ರಪತಿಗಳು ಈ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಗುವುದು. ನಮ್ಮ ರಾಜ್ಯದಲ್ಲಿ ಆರೂವರೇ ಕೋಟಿ ಜನರಿದ್ದು, ಪ್ರತಿ ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪ್ರತಿ ರೈತನಿಂದ ಸಹಿ ಸಂಗ್ರಹಿಸಬೇಕಿದೆ. ಬ್ಲಾಕ್ ಅಧ್ಯಕ್ಷರು ಹಾಗೂ ಪರಾಜಿತ ಅಭ್ಯರ್ಥಿಗಳು ತಾವು ಎಷ್ಟೇ ದೊಡ್ಡವರಾದರೂ ಯಾವುದೇ ಜಾತಿಗೆ ಸೇರಿದ್ದರೂ ಈ ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ಸಹಿಸಹಿತ ಮನವಿಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುವುದು. ಹೀಗಾಗಿ ಕರ್ನಾಟಕದಿಂದ ಅತಿ ಹೆಚ್ಚು ರೈತರ ಸಹಿ ಸಂಗ್ರಹವಾಗಬೇಕು. ಕರ್ನಾಟಕ ಭೂಸುಧಾರಣೆ ಹಾಗೂ ಕಾರ್ಮಿಕ ಕಾಯ್ದೆಗಳ ನೆಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಈ ಹೋರಾಟ ದೊಡ್ಡದಾಗಿರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಬಳಿಕ ರಾಜ್ಯಪಾಲರ ಬಳಿ ನಿಯೋಗದೊಂದಿಗೆ ತೆರಳಿ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳಿಗೆ ಸಹಿ ಹಾಕದಂತೆ ಮನವಿ ಮಾಡಿದರು.
