ರಾಷ್ಟ್ರೀಯ ಸುದ್ದಿ

ಕೇರಳ: ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಆಸ್ಪತ್ರೆಗಳು; ಅವಳಿ ಮಕ್ಕಳನ್ನು ಕಳೆದುಕೊಂಡ ದಂಪತಿ

ವರದಿಗಾರ (ಸೆ.28) ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದರೂ ಗರ್ಭಿಣಿ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ಪರಿಣಾಮ ಹೊಟ್ಟೆಯಲ್ಲಿದ್ದ ಅವಳಿ ಶಿಶುಗಳು ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

ಆಸ್ಪತ್ರೆಗಳ ಬೇಜವಾಬ್ದಾರಿತನದಿಂದ ಮಲಪ್ಪುರಂನ ಕೊಂಡೊಟ್ಟಿ ನಿವಾಸಿಗಳಾದ ಎನ್.ಸಿ.ಮುಹಮ್ಮದ್ ಶರೀಫ್ ಮತ್ತು ಶೆಹ್ಲಾ ತನ್ಸಿ ದಂಪತಿ ತಮ್ಮ ಅವಳಿ ಮಕ್ಕಳನ್ನು ಕಳೆದಕೊಂಡಿದ್ದಾರೆ. ಕೊರೊನಾ ಸೋಂಕಿತರಾಗಿದ್ದ ಗರ್ಭಿಣಿ ಸೆಪ್ಟಂಬರ್ 15ರಂದು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಶುಕ್ರವಾರ ಮತ್ತು ಶನಿವಾರ ಮಹಿಳೆಯ ಪತಿ ಸುಮಾರು 14 ಗಂಟೆಗಳ ಕಾಲ ವಿವಿಧ ಆಸ್ಪತ್ರೆಗಳಿಗೆ ಅಲೆದಾಡಿ ಹಾಸಿಗೆ ಕಾಯ್ದಿರಿಸಲು ಪ್ರಯತ್ನಿಸಿದ್ದರು. ಆದರೆ ಖಾಸಗಿ ಆಸ್ಪತ್ರೆಯಾಗಲಿ, ಸರ್ಕಾರಿ ಆಸ್ಪತ್ರೆಯಾಗಲಿ ಗರ್ಭಿಣಿಯನ್ನು ಸೇರಿಸಿಕೊಳ್ಳಲು ನಿರಾಕರಿಸಿದವು.

ಮಹಿಳೆಯ ಪತಿ, ಪತ್ರಕರ್ತ ಎನ್.ಸಿ.ಶರೀಫ್ ಅವರು ಎರಡು ಜಿಲ್ಲೆಗಳ ಬಹುತೇಕ ಆಸ್ಪತ್ರೆಗಳ ಬಾಗಿಲು ತಟ್ಟಿದ್ದಾರೆ. ಆದರೆ ಅಂತಿಮವಾಗಿ ಕೋಝಿಕ್ಕೋಡು ಮೆಡಿಕಲ್ ಕಾಲೇಜಿಗೆ ಪತ್ನಿಯನ್ನು ದಾಖಲಿಸುವಲ್ಲಿ ಅವರು ಯಶಸ್ವಿಯಾದರು. ಆದರೆ ಅವಳಿ ಶಿಶುಗಳು ಬದುಕುಳಿದಿಲ್ಲ. ಇದು ಆಕೆಯ ಮೊದಲ ಹೆರಿಗೆಯಾಗಿದೆ.

ಮಹಿಳೆ ಕೋವಿಡ್ ಗಾಗಿ ನಡೆಸಿದ ಆರ್ ಟಿ-ಪಿಸಿಆರ್ ಟೆಸ್ಟ್ ಬದಲಾಗಿ ಆಂಟಿಜೆನ್ ಪರೀಕ್ಷೆ ವರದಿ ನೀಡುವಂತೆ ಖಾಸಗಿ ಆಸ್ಪತ್ರೆಯವರು ಒತ್ತಾಯಿಸಿದರು. ಮಾತ್ರವಲ್ಲ ಆರ್ ಟಿ-ಪಿಸಿಆರ್ ಪರೀಕ್ಷಾ ವರದಿ ಸ್ವೀಕರಿಸಲು ನಿರಾಕರಿಸಿದ್ದರಿಂದ ಅವರನ್ನು ಶನಿವಾರ ಸಂಜೆ ಕೋಜಿಕ್ಕೋಡು ಮೆಡಿಕೆಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಅವಳಿ ಮಕ್ಕಳು ಮೃತಪಟ್ಟಿದ್ದವು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸಲು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಆದೇಶಿಸಿದ್ದಾರೆ. ಘಟನೆ ನೋವು ತಂದಿದೆ. ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಖಚಿತ ಎಂದು ಸಚಿವರು ಭರವಸೆ ನೀಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group