ವರದಿಗಾರ (ಸೆ.28): ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿ ರಾಜಸ್ತಾನದ ದುಂಗರ್ ಪುರದಲ್ಲಿ ಬುಡಕಟ್ಟು ಯುವಕರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸ್ ಗೋಲಿಬಾರ್ ಗೆ ಇಬ್ಬರು ಮೃತಪಟ್ಟಿದ್ದಾರೆ.
ಪ್ರತಿಭಟನೆಯ ವೇಳೆ ಮತ್ತೋರ್ವ ಸೇತುವೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ನಾಲ್ಕನೇ ದಿನವಾದ ನಿನ್ನೆ ಕೂಡ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿತ್ತು. ರಾಜ್ಯ ಸರ್ಕಾರ ಪ್ರತಿಭಟನಕಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ.
ಕಳೆದ 20 ದಿನಗಳಿಂದ ಬುಡಕಟ್ಟು ಯುವಕರು ಉದ್ಯೋಗ್ಕಕಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಕಳೆದ ವಾರದಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಗುರುವಾರ ಜೈಪುರದ ದುಂಗರಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ವಾಹನ ಸಂಚಾರ ತಡೆದು, ವಾಹನಗಳ ಮೇಲೆ ದಾಳಿ ನಡೆಸಿ, ಹಾನಿಗೊಳಿಸಲಾಗಿತ್ತು. ಕಲ್ಲು ತೂರಾಟದಿಂದ ಹಲವು ಪೊಲೀಸರು ಗಾಯಗೊಂಡಿದ್ದರು.
ಶಿಕ್ಷಕರ ಹುದ್ದೆಗಳಿಗೆ ಖಾಲಿ ಇರುವ 1,167 ಹುದ್ದೆಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ರಾಜಸ್ಥಾನದ ಬುಡಕಟ್ಟು ಯುವಕರು ಕಳೆದ ಎರಡು ವರ್ಷಗಳಿಂದ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಕರಿಗೆ ರಾಜಸ್ಥಾನದ ಅರ್ಹತಾ ಪರೀಕ್ಷೆ (ಆರ್ಇಇಟಿ) ಮೂಲಕ ರಾಜ್ಯದಲ್ಲಿ ನೇಮಕಾತಿಗಾಗಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬುದು ಅವರ ಬೇಡಿಕೆಯಾಗಿದೆ.
