ವರದಿಗಾರ (ಸೆ.28): ಬೆಂಗಳೂರು ಉಗ್ರ ಚಟುವಟಿಕೆಗಳ ಕೇಂದ್ರಸ್ಥಾನವಾಗುತ್ತಿದ್ದು, ರಾಷ್ಟ್ರೀಯ ತನಿಖಾ ದಳ-ಎನ್ಐಎ ಹಲವರನ್ನು ನಗರದಲ್ಲಿ ಬಂಧಿಸಿದೆ. ಆದ್ದರಿಂದ ಬೆಂಗಳೂರಿನಲ್ಲಿ ಎನ್ ಐಎ ಶಾಶ್ವತ ಕಚೇರಿಯನ್ನು ಸ್ಥಾಪಿಸಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ಇತ್ತೀಚೆಗಿನ ವರ್ಷಗಳಲ್ಲಿ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಕೃತ್ಯಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಎನ್ ಐ ಎ ಕಚೇರಿ ಬೆಂಗಳೂರಿನಲ್ಲಿ ಆರಂಭಿಸಬೇಕು ಎಂದು ಸೂರ್ಯ ಆಗ್ರಹಿಸಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅಮಿತ್ ಶಾ, ಎನ್ಐಎ ಶಾಶ್ವತ ಕಚೇರಿ ಬೆಂಗಳೂರಿನಲ್ಲಿ ಆರಂಭಿಸಲು ಒಪ್ಪಿಗೆ ನೀಡಿದ್ದಾರೆ ಎಂದು ತೇಜಸ್ವಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಸಂಸದರ ಈ ಟ್ವಿಟ್ ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಉಗ್ರರ ತಾಣವಾಗಿದ್ದರೆ ಅದಕ್ಕೆ ಬಿಜೆಪಿ ಸರ್ಕಾರವೇ ಕಾರಣ. ಇದನ್ನು ನಿಗ್ರಹಿಸುವಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿಫಲವಾಗಿದೆ ಎಂದರ್ಥ, ತಕ್ಷಣ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ವಜಾಗೊಳಿಸಿ ಎಂದು ತಿರುಗೇಟು ನೀಡಿದ್ದಾರೆ,
ಬೆಂಗಳೂರನ್ನು ಉಗ್ರ ತಾಣ ದು ಕರೆಯುವ ಮೂಲಕ ವಿಶ್ವದರ್ಜೆಯ ನಗರವಾದ ಬೆಂಗಳೂರಿಗೆ ಅವಮಾನ ಮಾಡಿದ್ದಾರೆ, ಯಾಕಾಗಿ ಸೂರ್ಯ ಅವರು ಬೆಂಗಳೂರಿನ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಇನ್ನು ಕೆಲವರು ಕಿಡಿಕಾರಿದ್ದಾರೆ.
ಶಾಸಕಿ ಸೌಮ್ಯ ರೆಡ್ಡಿ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನ ನಗರ ಸುಂದರ, ಕಾಸ್ಮೋಪಾಲಿಟನ್, ವೈವಿಧ್ಯತೆ, ಐಟಿ/ಬಿಟಿ ಹಬ್ ಆಗಿದೆ. ಸುರಕ್ಷತೆ, ಶಾಂತಿಯುತ ಹಾಗೂ ಸಿಲಿಕಾನ್ ಸಿಟಿಯಾಗಿದೆ. ನನ್ನ ಈ ನಗರಕ್ಕೆ ಕಳಂಕ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಸೌಮ್ಯ ರೆಡ್ಡಿ, ಬಿಬಿಎಂಪಿ-ಬಿಜೆಪಿ, ರಾಜ್ಯ-ಬಿಜೆಪಿ, ಕೇಂದ್ರ-ಬಿಜೆಪಿ ಅಧಿಕಾರದಲ್ಲಿದೆ. 28ರಲ್ಲಿ 25 ಸಂಸದರು ಬಿಜೆಪಿಯವರು ಇದ್ದಾರೆ. ಅವರೆಲ್ಲರೂ ಏನು ಮಾಡುತ್ತಿದ್ದಾರೆ, ಕಡ್ಲೆ ಪುರಿ ತಿನ್ನುತ್ತಿದ್ದಾರೆಯೇ ? ಎಂದು ಕಿಡಿಕಾರಿದ್ದಾರೆ.
ನಮ್ಮ ನಗರ ಅವರಿಗೆ ಎಲ್ಲವನ್ನೂ ನೀಡಿದೆ, ಅವರ ಕಾರ್ಯಸೂಚಿಗಾಗಿ ನಮ್ಮ ನಗರದ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. 1.2 ಕೋಟಿ ಜನರನ್ನು ತಪ್ಪಿತಸ್ಥರನ್ನಾಗಿ ಚಿತ್ರಿಸಿದ್ದಾರೆ. ಇಂತಹ ಅವಿವೇಕ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
