ಮೊಲೆ ಹಾಲು ಕುಡಿದು
ಅರಳಬೇಕಾದ ಕಂದ,
ಕೆಸರ ನೀರ ಕುಡಿದು
ಚಿರ ನಿದಿರೆಯಲಿ
ಅಂಗಾತ ಮಲಗಿರುವೆ..!!
ಜಗದ ಕೆಲ ಕುರುಡು ಕಣ್ಣಿಗೆ
ತೇಲುವ ಮಗು ಗೊಂಬೆಯಂತೆ
ಅನಿಸತೊಡಗಿರಬಹುದು,
ಹೆತ್ತ ಮಾತೃ ಮನವು
ಜೀವವಿದ್ದೂ
ಗೊಂಬೆಯಂತಾಗಿರಬಹುದು..!!
ಶಾಂತಿ ವಿನಂತಿ ಬುದ್ಧನ
ಮಾತು ಸೋತು
ಮಾನವೀಯತೆ
ಅದೇಕೋ ಮರೀಚಿಕೆಯಾದಂತಿದೆ,
ಮತೀಯವಾದಿಗಳಿಗೆ ಬುದ್ಧನ
ಭೋದನೆ ಮರೆತಂತಿದೆ..!!
ಅದೆಷ್ಟು ಕಂದಮ್ಮಗಳ
ಸಾವು ಕಂಡರೂ,
ಖಡ್ಗವಿರಿದು ಮಾನವ ದೇಹಗಳ
ಕೊಚ್ಚಿ ಅಟ್ಟಹಾಸಗೈದರೂ,
ಅದಾವ ಸೀಮೆಯ
ಧ್ಯೇಯ ಗೆದ್ದುಬಿಟ್ಟಿರಿ..?
ವಿಧವೆಯಾದವಳು ಮೌನ ವಹಿಸಿ
ವಿಧೇಯಳಾಗಿಬಿಟ್ಟಳು…
ಅನ್ನ ನೀರಿಲ್ಲದೆ ನಿರಾಶ್ರಿತಳಾಗಿ
ಅರಿಯದೂರು ಸೇರಿಬಿಟ್ಟಳು…
ತೊಟ್ಟಿಲಲ್ಲಿಲ್ಲದ ಮಗುವ
ನೆನೆದು ದಿನ ಮುಂದೂಡಿಬಿಟ್ಟಳು…
ಅದೆಷ್ಟು ಮಗು ವಿಯೋಗ ರಕ್ಷಕರು..!!
ಇಹ ಸುಖದ ಕೊಲೆಗಡುಕರೇ
ಮೌನ ಮುರಿದು ತಿಳಿಸಿಬಿಡಿ…
ಬೇಕಾಗಿರುವುದಾದರೂ ಏನು..?
ಕಂದಮ್ಮಗಳ ಆಯುಷ್ಯದಲಿ
ನಿಮಗಿರುವ ಗಳಿಕೆಯಾದರೂ ಏನು..?
ನೆನಪಿಟ್ಟುಬಿಡಿ,
ಇಹದ ಮೂಲೆಯಲ್ಲಾದರೂ
ನಮ್ಮ ನೋವಿಗೆ ಸಂತಾಪವಿರಬಹುದು!
ನೀವೀಗ ಬೇಗ ಬದುಕಿ ಬಿಡಿ…!!!
ಇಂದಲ್ಲ ನಾಳೆ,
ನಿಮ್ಮ ದ್ವೇಷದಾಹದ ಸಮಾಪ್ತಿಗಾಗಿ
ಗಟ್ಟಿ ಸ್ವರಗಳದೋ ಬರುವವರೆಗೆ..!!
ಎನ್.ರಾಝ್ ಸಜಿಪ
(ಚೋಕಲೇಟ್ ಬೋಯ್)
