ವರದಿಗಾರ (ಸೆ.27): ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ವಿವಾದಿತ ಕೃಷಿ ವಲಯದ ಮೂರು ವಿಧೇಯಕಗಳಿಗೆ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಭಾನುವಾರ ಅಂಕಿತ ಹಾಕಿದ್ದಾರೆ.
ಕಳೆದ ವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಕೋಲಾಹಲದ ನಡುವೆ ಎರಡು ವಿಧೇಯಕಗಳನ್ನು ಅಂಗೀಕರಿಸಿತ್ತು. ವಿಧೇಯಕಗಳಿಗೆ ಅಂಕಿತ ಹಾಕದೆ ಅವುಗಳನ್ನು ಪುನರ್ ಪರಿಶೀಲನೆ ನಡೆಸುವಂತೆ ಸಂಸತ್ತಿಗೆ ವಾಪಸ್ಸು ಕಳುಹಿಸಬೇಕೆಂದು ಪ್ರತಿಪಕ್ಷಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದವು. ಕಳೆದ ಜೂನ್ ತಿಂಗಳಲ್ಲಿ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗಳ ಬದಲಾಗಿ ಈ ವಿಧೇಯಕಗಳನ್ನು ತರಲಾಗಿದ್ದು, ವಿಧೇಯಕಗಳು ರೈತ ವಿರೋಧಿ ಎಂದು ಆರೋಪಿಸಲಾಗುತ್ತಿದ್ದು, ರೈತರು ಸೇರಿದಂತೆ ಕೃಷಿ ಸಮುದಾಯದ ತೀವ್ರ ಕಳವಳಕ್ಕೆ ಕಾರಣವಾಗಿದೆ.
