ನಾಲಗೆ ಕತ್ತರಿಸಿದ ದುಷ್ಕರ್ಮಿಗಳು
ವರದಿಗಾರ (ಸೆ.27): ಹತ್ತೊಂಬತ್ತು ವರ್ಷದ ದಲಿತ ಹುಡುಗಿಯ ಮೇಲೆ ಮೇಲ್ವರ್ಗದ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವ ಆಕೆಯನ್ನು ಅಲಿಘಡ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದರೂ ಇನ್ನು ಕೂಡ ಐಸಿಯುನಲ್ಲಿಯೇ ಇದ್ದಾಳೆ. ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹೋಗಿದ್ದಾಗ ಸೆಪ್ಟಂಬರ್ 14ರಂದು ನಾಲ್ವರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ನಾಲಿಗೆಯನ್ನು ಕತ್ತರಿಸಲಾಗಿದ್ದು, ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ತೀವ್ರ ಗಾಯಗಳಾಗಿವೆ. ಕತ್ತು ಹಿಸುಕಿರುವುದು ಮತ್ತು ಹಲ್ಲೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಆಸ್ಪತ್ರೆಯ ಮೂಲಗಳ ತಿಳಿಸಿವೆ.
ಆಕೆಯ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೊಲೆ ಯತ್ನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿ ಸಂದೀಪ್ ಎಂಬಾತನನ್ನು ಬಂಧಿಸಿದ್ದಾರೆ.
ಹುಡುಗಿಯ ಹೇಳಿಕೆ ಆಧಾರದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ಮೂವರ ಹೆಸರನ್ನು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ ಎಂದು ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ವಿರ್ ತಿಳಿಸಿದ್ದಾರೆ.
ಈ ಮಧ್ಯೆ, ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ದೀಪಕ್ ಕುಮಾರ್, ಬಾಲಕಿಯನ್ನು ಭೇಟಿಯಾಗಿದ್ದು, ಆರೋಪಿಯಿಂದ ಸಂತ್ರಸ್ತ ಕುಟುಂಬಕ್ಕೆ ಬೆದರಿಕೆ ಇರುವುದನ್ನು ಹುಡುಗಿ ಹೇಳಿದ್ದಾಳೆ ಎಂದು ತಿಳಿಸಿದ್ದಾರೆ.
ಈ ಕುರಿತು ವಿವರವಾದ ವರದಿಯನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರಿಗೆ ನೀಡಲಾಗುವುದು ಎಂದು ಅವರು ಹೇಳಿದರು.
