ರಾಷ್ಟ್ರೀಯ ಸುದ್ದಿ

ಎಸ್ಸಿ,ಎಸ್ಟಿ, ಹಿಂದುಳಿದವರು ಹಿಂದೂಗಳಲ್ಲ ಎಂಬ ಪೋಸ್ಟ್ ಹಾಕಿದ್ದ ದಲಿತ ವಕೀಲನ ಬರ್ಬರ ಹತ್ಯೆ

ವರದಿಗಾರ (ಸೆ.27): ಗುಜರಾತ್‌ನ ಕಚ್ ಜಿಲ್ಲೆಯ ದಲಿತ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಹಿಂದುತ್ವವಾದಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಪೋಸ್ಟ್ ಅವರ ಹತ್ಯೆಗೆ ಕಾರಣ ಎನ್ನಲಾಗಿದೆ. ಕೊಲೆ ನಡೆದ 24 ಗಂಟೆಗಳ ಒಳಗೆ ಮುಂಬೈನ ಮಲಾಡ್ ವೆಸ್ಟ್ ನಲ್ಲಿರುವ ಸ್ಟೇಷನರಿ ಅಂಗಡಿಯ ಬ್ರಾಹ್ಮಣ ಕೆಲಸಗಾರನೊಬ್ಬನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ದೇವ್ ಜಿ ಮಹೇಶ್ವರಿ ಹತ್ಯೆಯಾದ ವಕೀಲ. ಅವರು ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟದ (ಬಿಎಎಂಸಿಇಎಫ್) ಮತ್ತು ಭಾರತೀಯ ಕಾನೂನು ವೃತ್ತಿಪರರ ಸಂಘದ ಹಿರಿಯ ಕಾರ್ಯಕರ್ತರಾಗಿದ್ದರು.

‘ಬ್ರಾಹ್ಮಣ ವಿರೋಧಿ ಪೋಸ್ಟ್’ ಹಾಕಿದ್ದ ಕಾರಣಕ್ಕೆ ದಲಿತ ವಕೀಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವ್ ಜಿ ಮಹೇಶ್ವರಿಯ ಫೇಸ್‌ಬುಕ್ ಪೋಸ್ಟ್ ನಲ್ಲಿ, ಬಮ್ ಸೆಫ್ ರಾಷ್ಟ್ರೀಯ ಅಧ್ಯಕ್ಷ ವಾಮನ್ ಮೆಶ್ರಾಮ್ ಅವರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಸದಸ್ಯರು ಹಿಂದೂಗಳಲ್ಲ ಎಂದು ಹೇಳುವ ವೀಡಿಯೊ ಅಪ್ ಲೋಡ್ ಮಾಡಿದ್ದರು.

ರಾಪರ್ ಮೂಲದ ರಾವಲ್ ಬಂಧಿತ ಆರೋಪಿ. ಈತನಿಗೂ ಮೃತ ವಕೀಲರಿಗೂ ಬ್ರಾಹ್ಮಣ ಧರ್ಮದ ವಿಷಯದಲ್ಲಿ ಜಗಳ ಉಂಟಾಗಿತ್ತು. ಮೃತ ವಕೀಲರೊಂದಿಗೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದ. ಇದೇ ಕಾರಣಕ್ಕೆ ಮಹೇಶ್ವರಿಯೊಂದಿಗೆ ಜಗಳ ಮಾಡಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

“ಮಹೇಶ್ವರಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಬ್ರಾಹ್ಮಣ ಧರ್ಮವನ್ನು ಟೀಕಿಸುವ ಪೋಸ್ಟ್ಗಳನ್ನು ಬರೆದು ಹಂಚಿಕೊಂಡಿದ್ದಾರೆ. ರಾವಲ್ ಆ ಅಭಿಪ್ರಾಯಗಳನ್ನು ಒಪ್ಪಲಿಲ್ಲ ಮತ್ತು ಸಾರ್ವಜನಿಕವಾಗಿ ಅಂತಹ ಪೋಸ್ಟ್ ಗಳನ್ನು ಹಾಕದಂತೆ ಮಹೇಶ್ವರಿಯನ್ನು ಎಚ್ಚರಿಸಿದ್ದಾನೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹೇಶ್ವರಿ ಮತ್ತು ರಾವಲ್ ನಡುವೆ ಒಂದು ತಿಂಗಳಿನಿಂದ ಪದೇ ಪದೇ ಇದೇ ವಿಷಯದಲ್ಲಿ ಘರ್ಷಣೆ ನಡೆದಿತ್ತು.

ಬ್ರಾಹ್ಮಣನಾಗಿರುವ ರಾವಲ್ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಮಹೇಶ್ವರಿ ಒಂದೇ ಗ್ರಾಮದವರಾಗಿದ್ದರು. ರಾವಲ್ ಒಂದು ಬಾರಿ ಮಹೇಶ್ವರಿ ಅವರ ಕಚೇರಿಗೆ ಆಗಮಿಸಿ ಬೆದರಿಕೆ ಹಾಕಿದ್ದ. ಆದರೆ ಮಹೇಶ್ವರಿ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿರುಗೇಟು ನೀಡಿದ್ದರು. ಮಾತ್ರವಲ್ಲ ಏನು ಬೇಕಾದರೂ ಮಾಡು ಎಂದು ಸವಾಲು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹೇಶ್ವರಿಯನ್ನು ಕೊಲೆ ಮಾಡುವ ಉದ್ದೇಶದಿಂದ ಬುಧವಾರ ಮಲಾಡ್‌ನಿಂದ ರಾಪರ್ ಗೆ ಮಾರಕಾಯುಧಗಳಿಂದ ಬಂದ ರಾವಲ್, ಶುಕ್ರವಾರ ಸಂಜೆ 6 ಗಂಟೆಗೆ ಮಹೇಶ್ವರಿ ತಮ್ಮ ಕಚೇರಿ ಕಟ್ಟಡಕ್ಕೆ ಪ್ರವೇಶಿಸುತ್ತಿದ್ದಾಗ ಹಿಂದಿನಿಂದ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾವಲ್ ವಿರುದ್ಧ ರಾಪರ್ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಮತ್ತು ಎಸ್ಸಿ / ಎಸ್ಟಿ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ರಾವಲ್ ನನ್ನು ಕಸ್ಟಡಿಗೆ ಪಡೆಯಲು ಗುಜರಾತ್ ಪೊಲೀಸರ ತಂಡ ಶನಿವಾರ ತಡರಾತ್ರಿ ಮುಂಬೈಗೆ ಆಗಮಿಸಿದೆ.

ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿರುವ ಪೊಲೀಸರು ರಾವಲ್ ಒಬ್ಬ ಮಾತ್ರ ಈ ಕೃತ್ಯವೆಸಗಿದ್ದಾನೆ ಎಂದು ತಿಳಿಸಿದ್ದಾರೆ.

ಆದರೆ, ರಾವಲ್ ಸೇರಿದಂತೆ ಒಂಬತ್ತು ಆರೋಪಿಗಳ ವಿರುದ್ಧ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಶನಿವಾರ, ರಾಪರ್ ನಲ್ಲಿ ದಲಿತ ಸಮುದಾಯದ ಸದಸ್ಯರು ಬೀದಿಗಿಳಿದು, ಮಹೇಶ್ವರಿಯ ಕೊಲೆಗಾರರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ರಾವಲ್ ಜೊತೆಗೆ ಒಂಬತ್ತು ಆರೋಪಿಗಳಲ್ಲಿ ಐವರನ್ನು ಬಂಧಿಸಲಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಬಹುಜನಮುಕ್ತಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ವಿ.ಎಲ್.ಮಾತಂಗ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಆರೋಪಿಯನ್ನು ಬಂಧಿಸುವವರೆಗೂ ಮೃತದೇಹವನ್ನು ಪಡೆಯಲು ಕುಟುಂಬದ ಸದಸ್ಯರು ನಿರಾಕರಿಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.
“ಮೃತರು ಪರಿಶಿಷ್ಟ ಜಾತಿಗೆ ಸೇರಿದವರು. ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿದ ನಂತರವೇ ಅವರು ಮೃತ ದೇಹವನ್ನು ಸ್ವೀಕರಿಸಿ ಅಂತಿಮ ವಿಧಿಗಳನ್ನು ನಡೆಸುವುದಾಗಿ ಹೇಳಿದ್ದಾರೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ (ಗಡಿ ಶ್ರೇಣಿ) ಜೆ ಆರ್ ಮೊಥಲಿಯಾ ತಿಳಿಸಿದ್ದಾರೆ.

ರಾವಲ್ ಸೇರಿ ಜಯಸುಖ್ ಲುಹಾರ್, ಖಿಮ್ಜಿ ಲುಹಾರ್, ಧವಲ್ ಲುಹಾರ್, ದೇವಭಾ ಸೋಧಾ, ವಿಜಯಸಿಂಹ ಸೋಧಾ, ಮಯೂರ್ ಸಿಂಗ್ ಸಿಂಧಾ, ಪ್ರವೀನ್‌ಸಿಂಹ ಸೋಧಾ ಮತ್ತು ಅರ್ಜನ್ ಸಿನ್ ಸೋಧಾ ಎಂಬವರ ಹೆಸರು ಎಫ್ ಐಆರ್ ನಲ್ಲಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group