ವರದಿಗಾರ (ಸೆ.25): ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧದ ಲಂಚ ಸ್ವೀಕಾರ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಇತರರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಹುಮಹಡಿ ಸಮುಚ್ಚಯ ನಿರ್ಮಾಣ ಕಂಪನಿಯಿಂದ 7.40 ಕೋಟಿ ರೂಪಾಯಿ ಲಂಚ ಪಡೆದಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಂದು ಒತ್ತಾಯಿಸಿ ಜನಾಧಿಕಾರ ಸಂಘರ್ಷ ಪರಿಷತ್ ಸದಸ್ಯರು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಶುಕ್ರವಾರ ದೂರು ನೀಡಿದ್ದಾರೆ.
ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹಾಗೂ ಶೇಷಾದ್ರಿಪುರ ಠಾಣೆ ಇನ್ಸ್ಪೆಕ್ಟರ್ ಅವರಿಗೂ ದೂರು ನೀಡಲಾಗಿದೆ. 17 ಕೋಟಿ ಲಂಚ ನೀಡುವಂತೆ ವಸತಿ ಸಮುಚ್ಚಯ ನಿರ್ಮಾಣದ ರಾಮಲಿಂಗಂ ಕನ್ಟ್ರಕ್ಷನ್ಸ್ ಕಂಪನಿಗೆ ಬೇಡಿಕೆ ಇರಿಸಲಾಗಿತ್ತು. ನಂತರ, ನಗದು ಮತ್ತು ಆರ್ಟಿಜಿಎಸ್ ಮೂಲಕ 7.40 ಕೋಟಿ ಹಣವನ್ನು ಆರೋಪಿಗಳು ಸುಲಿಗೆ ಮಾಡಿದ್ದಾರೆ.
ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಹೇಳಿಕೊಂಡು ಲಂಚದ ರೂಪದಲ್ಲಿ ಹಣ ಪಡೆದಿದ್ದಾರೆ. ಅದು ಗೊತ್ತಿದ್ದರೂ ಆ ಅಧಿಕಾರಿ ಮೇಲೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ದೂರುದಾರರಿಗೆ ಭರವಸೆ ನೀಡಿದ್ದಾರೆ.
