ವರದಿಗಾರ (ಸೆ.25): ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಬೆಂಗಳೂರಿನಲ್ಲಿಂದು ನಡೆಸಿದ ಮಾತುಕತೆ ವಿಫಲವಾಗಿದ್ದು, ಸೆಪ್ಟಂಬರ್ 28ರಂದು ನಡೆಸಲು ಉದ್ದೇಶಿಸಿರುವ ಕರ್ನಾಟಕ ಬಂದ್ ನಿಶ್ಚಿತ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಎಪಿಎಂಸಿ, ಭೂ ಸುಧಾರಣಾ ಕಾಯಿದೆಗಳ ತಿದ್ದುಪಡಿಯನ್ನು ಹಿಂಪಡೆಯದಿದ್ದರೆ ಈ ಹಿಂದಿನ ತೀರ್ಮಾನದಂತೆ ಸೆ.28 ರಂದು ಕರ್ನಾಟಕ ಬಂದ್ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ 5 ದಿನಗಳಿಂದ ನಗರದ ಸ್ವಾತಂತ್ರ ಉದ್ಯಾವನದಲ್ಲಿ ಕಾಯಿದೆಗೆ ತರುತ್ತಿರುವ ತಿದ್ದುಪಡಿ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ನಿಯೋಗವನ್ನು ಕರೆಸಿ ಮಾತುಕತೆ ನಡೆಸಿದರು. ರೈತರ ಕಾಯಿದೆ ತಿದ್ದುಪಡಿ ತರುವ ಪ್ರಸ್ತಾವ ಹಿಂಪಡೆಯುವ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ.
ಯಾವುದೇ ಕಾರಣಕ್ಕೂ ಕಾಯಿದೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ನಮ್ಮ ನಿಲುವಿನಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
