ಉತ್ತರ ಪ್ರದೇಶದ ಮೀರತ್ ನಲ್ಲಿ ಆಘಾತಕಾರಿ ಘಟನೆ: 52 ಶಿಕ್ಷಕಿಯರಿಂದ ಪೊಲೀಸರಿಗೆ ದೂರು
ವರದಿಗಾರ (ಸೆ.25): ಶಾಲೆಯ ಶಿಕ್ಷಕಿಯರು ಅಲ್ಲಿನ ಶೌಚಾಲಯದಲ್ಲಿದ್ದಾಗ ಅದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡ ಶಾಲಾಡಳಿತ ಮಂಡಳಿಯವರು ಆ ವಿಡಿಯೋ ಮೂಲಕ ಬ್ಲಾಕ್ ಮೇಲ್ ಮಾಡಿ ಹಲವು ತಿಂಗಳು ವೇತನರಹಿತವಾಗಿ ಆ ಶಿಕ್ಷಕರಿಂದ ಕೆಲಸ ಮಾಡಿಸಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದ್ದು, ಶಾಲೆಯ 52 ಶಿಕ್ಷಕಿಯರು ಒಟ್ಟಾಗಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಶಾಲೆಯ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ತಮ್ಮ ಬಾಕಿ ಇರುವ ಸಂಬಳವನ್ನು ಪಾವತಿಸಲು ಕೇಳಿದಾಗಲೆಲ್ಲಾ ಈ ವಿಡಿಯೋವನ್ನು ಮತ್ತು ಚಿತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಶಿಕ್ಷಕಿಯರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದಲ್ಲಿ ಬುಧವಾರ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮತ್ತು ಅವರ ಮಗನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), 354 (ಎ) (ಲೈಂಗಿಕ ಕಿರುಕುಳ) ಮತ್ತು 354 (ಸಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಆದರೆ ತನ್ನ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳನ್ನು ಕಾರ್ಯದರ್ಶಿ ತಳ್ಳಿಹಾಕಿದ್ದಾರೆ.
“ಮಹಿಳೆಯರ ಶೌಚಾಲಯದೊಳಗೆ ಯಾವುದೇ ಸಿಸಿಟಿವಿ ಇಲ್ಲ. ಆದರೆ ಪುರುಷರ ಶೌಚಾಲಯಗಳಲ್ಲಿ ಅಳವಡಿಸಲಾಗಿದೆ. ಕೆಲವು ಶಾಲೆಗಳಲ್ಲಿ ಇತ್ತೀಚೆಗೆ ಕೊಲೆ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಶೌಚಾಲಯದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಕಳೆದ ಕೆಲವು ತಿಂಗಳುಗಳಿಂದ ಶಾಲೆಯು ಶಿಕ್ಷಕರಿಗೆ ಸಂಬಳ ನೀಡಿಲ್ಲ ಎಂಬುದನ್ನು ಕಾರ್ಯದರ್ಶಿ ಒಪ್ಪಿಕೊಂಡಿದ್ದಾರೆ. ಇದಕ್ಕೆ ಪ್ರಸ್ತುತ ಕೊರೊನಾ ಸಾಂಕ್ರಾಮಿಕ ಕಾರಣವಾಗಿದೆ ಎಂದು ಅವರು ಹೇಳಿದರು.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸದರ್ ಬಜಾರ್ ಪೊಲೀಸ್ ಠಾಣೆ ಎಸ್ಎಚ್ಒ ವಿಜಯ್ ಗುಪ್ತಾ ತಿಳಿಸಿದ್ದಾರೆ. ತನಿಖೆಯಲ್ಲಿ ಪೊಲೀಸರಿಗೆ ನೆರವು ನೀಡಲು ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಎಂದರು.
2017 ರಲ್ಲಿ ಅದೇ ಶಾಲೆ ತನ್ನ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ ತಲೆ ಕೂದಲು ಬೋಳಿಸುವಂತೆ ಆದೇಶಿಸಿತ್ತು. ಮಾತ್ರವಲ್ಲ ಇದು ಶಾಲೆ, ನಮಾಜ್ ನೀಡುವ ಮದರಸಾ ಅಲ್ಲ ಎಂದು ವಿದ್ಯಾರ್ಥಿಗಳ ಗಡ್ಡವನ್ನು ಬೋಳಿಸುವಂತೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
