ವರದಿಗಾರ (ಸೆ.24): ರೈತರ ವಿರೋಧಿ ಮಸೂದೆಗಳನ್ನು ವಿರೋಧಿಸಿ ನಾಳೆ ಶುಕ್ರವಾರ ರೈತ ಸಂಘ, ಮಾನವ ಹಕ್ಕುಗಳ ಸಮಿತಿ ಸೇರಿ 9ಕ್ಕೂ ಹೆಚ್ಚು ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಿದ್ದು ಬರುವ ಸೋಮವಾರ ರಾಜ್ಯ ಬಂದ್ ಮಾಡಲು ಮುಂದಾಗಿವೆ.
ಬೆಂಗಳೂರನ್ನು ಸಂಪರ್ಕಿಸುವ ಐದು ರಾಷ್ಟ್ರೀಯ ಹೆದ್ದಾರಿ ನಾಳೆ ಬಂದ್ ಆಗಲಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ಹಸಿರು ಸೇನೆ ವತಿಯಿಂದ ಮೈಸೂರು ಬ್ಯಾಂಕ್ ವೃತ್ತದ ಬಳಿ ನಾಳೆ ಪ್ರತಿಭಟನೆ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ ಖಂಡಿಸಿ ಸೋಮವಾರ 28ರಂದು ರಾಜ್ಯ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಾಳೆ ಸಾಂಕೇತಿಕವಾಗಿ ಜಿಲ್ಲಾ ಕೆಂದ್ರಗಳಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಡೆಸಲಾಗುವುದು. ಹಲವು ಸಂಘಟನೆಗಳು ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ಕೈಗೊಂಡಿದ್ದು ಅದಕ್ಕೆ ನಾವು ಸಹಕಾರ ನೀಡುತ್ತೇವೆ. ಅಹಿಂಸಾತ್ಮಕವಾಗಿ ಪ್ರತಿಭಟನೆ ಹಾಗೂ ಬಂದ್ ನಡೆಸಬೇಕು ಎಂಬುದು ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಭೂ ಸುಧಾರಣೆ ಕಾಯ್ದೆ, ವಿದ್ಯುತ್, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಜಾರಿ ವಿರೋಧಿಸಿ ಕಳೆದ ಮೂರು ದಿನಗಳಿಂದ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಫ್ರೀಡಂ ಪಾರ್ಕ್ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಇದೇ 28ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ.
ವಿವಿಧ ಸಂಘಟನೆಗಳು ನಾಳೆ ರಸ್ತೆ ತಡೆ ನಡೆಸಲು ಮುಂದಾಗಿರುವುದರಿಂದ ಪುಣೆ, ಬೆಂಗಳೂರು, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳು ಬಂದ್ ಮಾಡಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ನಗರದ ಜನತೆಗೆ ತೊಂದರೆಯಾಗಲಿದೆ. ನಾಳೆಯೇ ಕರ್ನಾಟಕ ಬಂದ್ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ ರೈತ ಸಂಘಟನೆಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಬರುವ ಸೋಮವಾರ 28ರಂದು ಬಂದ್ ಮಾಡಲು ನಿರ್ಧರಿಸಲಾಗಿದೆ.
