ರಾಜ್ಯ ಸುದ್ದಿ

ಜ್ಞಾನ ಜ್ಯೋತಿ, ಧಾರ್ಮಿಕ ವಿದ್ವಾಂಸ ಬೇಕಲ ಉಸ್ತಾದ್ ನಿಧನ

ವರದಿಗಾರ (ಸೆ.24): ಮುಸ್ಲಿಂ ಸಮುದಾಯದ ಹಿರಿಯ ಧಾರ್ಮಿಕ ವಿದ್ವಾಂಸ ಹಾಗೂ ಖಾಝಿ ಅಲ್ ಹಾಜಿ ಬೇಕಲ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ (71 ವ) ಗುರುವಾರ ನಿಧನರಾಗಿದ್ದಾರೆ.

ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿ, ಜಾಮಿಯಾ ಸಅದಿಯಾ ಅರೇಬಿಯಾ ಕಾಲೇಜಿನ ಪ್ರಚಾರ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮುಸ್ಲಿಂ ಸಮುದಾಯದ ಶೈಕ್ಷಣಿಕ ರಂಗದಲ್ಲಿ ಅಲ್ ಹಾಜಿ ಬೇಕಲ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ರವರ ಸೇವೆ ಪ್ರಶಂಸನೀಯವಾಗಿತ್ತು.

ಇತ್ತೀಚೆಗೆ ಅವರು ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಅಗತ್ಯವಿರುವುದರಿಂದ ಅರ್ಹರು ಪ್ಲಾಸ್ಮಾ ದಾನ ಮಾಡುವಂತೆ ಕರೆ ನೀಡಿದ್ದರು. ಮಾತ್ರವಲ್ಲ ಇದು ಪುಣ್ಯ ಕಾರ್ಯ ಎಂದು ಹೇಳಿದ್ದರು.

ಧಾರ್ಮಿಕ ಜ್ಞಾನದ ಜೊತೆ ಖಗೋಳಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಅವರು ಸಾವಿರಾರು ಶಿಷ್ಯ ವೃಂದವನ್ನು ಸಂಪಾದಿಸಿದ್ದರು. ಇವರ ಅಗಲಿಕೆಗೆ ವಿವಿಧ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂಘಟನೆಗಳು ಸಂತಾಪ ಸೂಚಿಸಿದೆ.

ಸಂತಾಪಗಳು:

“ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಕರ್ನಾಟಕ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರೂ, ಜಾಮಿಅ ಸಅದಿಯ್ಯ ಪ್ರಾಂಶುಪಾಲರೂ ಆಗಿದ್ದ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ವಫಾತಾದರು. ಉದ್ಧಾಮ ವಿದ್ವಾಂಸರೂ, ದೊಡ್ಡ ಮುದರ್ರಿಸರೂ ಆಗಿದ್ದರು. ತಾಜುಲ್ ಉಲಮಾ ಉಳ್ಳಾಲ್ ತಂಙಳ್ ರವರ ಪ್ರೀತಿಯ ಶಿಷ್ಯ. ತಾಜುಲ್ ಫುಖಹಾ ಎಂಬ ನಾಮದಿಂದ ಪ್ರಸಿದ್ಧರಾಗಿದ್ದರು. ಫಿಕ್ಹ್ ಹಾಗೂ ಗೋಳಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದರು.1971 ರಲ್ಲಿ ಬಿರುದು ಪಡೆದ ಬಳಿಕ ಐದು ದಶಕಗಳ ಕಾಲ ದರ್ಸ್ ನಡೆಸಿದ ಅವರು ಸಾವಿರಾರು ಶಿಷ್ಯ ಸಂಪತ್ತನ್ನು ಹೊಂದಿದ್ದಾರೆ. ಕರ್ನಾಟಕದ ಉಡುಪಿ ಹಾಸನ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಜಮಾಅತ್ ಹಾಗೂ ಹಲವಾರು ಮೊಹಲ್ಲಾಗಳ ಖಾಝಿಯಾಗಿದ್ದರು. ಕೇರಳದಲ್ಲಿ ಸ್ಪಷ್ಟ ಮಲಯಾಳದಲ್ಲೂ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲೂ ಅವರು ನಡೆಸಿದ ಭಾಷಣಗಳು ಸುನ್ನಿಗಳಿಗೆ ಆವೇಶ ನೀಡುವಂತದ್ದಾಗಿತ್ತು. ಸಾವಿರಾರು ಮಂದಿಯನ್ನು ಸುನ್ನತ್ ಜಮಾಅತ್ತಿನ ನೈಜ ಆಶಯಗಳಿಗೆ ತಲುಪಿಸಿದ್ದರು. ತಾಜುಲ್ ಉಲಮಾರ ಬಳಿಕ ಕರ್ನಾಟಕದ ಸುನ್ನೀ ಚಟುವಟಿಕೆಗಳಿಗೆ ಆವೇಶಭರಿತವಾದ ನಾಯಕತ್ವ ನೀಡಿದ್ದು ಉಸ್ತಾದರಾಗಿದ್ದರು. ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರವರ ವಫಾತ್ ನೈಜಾರ್ಥದಲ್ಲಿ ಒಂದು ದೊಡ್ಡ ನಷ್ಟ. ಅಲ್ಲಾಹು ಅವರ ಪಾರತ್ರಿಕ ಜೀವನದ ಪದವಿಗಳನ್ನು ಉನ್ನತಗೊಳಿಸಲಿ.”

-ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್

“ಹಿರಿಯ ಧಾರ್ಮಿಕ ವಿದ್ವಾಂಸ , ಕರ್ಮಶಾಸ್ತ್ರ , ಖಗೋಳಶಾಸ್ತ್ರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಸುನ್ನಿ ನಾಯಕ, ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ರವರ ಸುದ್ದಿ ಕೇಳಿ ಆಘಾತವಾಯಿತು. ಅವರ ಅಗಲುವಿಕೆ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ. ಅಲ್ಲಾಹು ಅವರಿಗೆ ಮಗ್ಫಿರತ್ ಕರುಣಿಸಲಿ,ಅವರ ಹಿತೈಷಿಗಳಿಗೆ,ಅಭಿಮಾನಿಗಳಿಗೆ ಹಾಗೂ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ”.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group