ರಾಷ್ಟ್ರೀಯ ಸುದ್ದಿ

ಕನ್ನಡ ಮಾಧ್ಯಮದ ಕೋಮುವಾದಿ ನಿಲುವು ಬಹಿರಂಗಪಡಿಸಿದ ಸಂಶೋಧಕರು

“ದ್ವೇಷ ಭಾಷಣದ ವಿರುದ್ಧದ ಅಭಿಯಾನ” ವರದಿ ಬಿಡುಗಡೆ

ವರದಿಗಾರ (ಸೆ.24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಮತ್ತು ನಂತರದ ಕೊರೊನಾ ಸಾಂಕ್ರಾಮಿಕದ ಸಂದರ್ಧದಲ್ಲಿ ಕನ್ನಡ ಮಾಧ್ಯಮವು, ಹೆಚ್ಚು ಕೋಮುವಾದಿಯಾಗಿ ನಡೆದುಕೊಂಡಿರುವುದನ್ನು “ದ್ವೇಷ ಭಾಷಣದ ವಿರುದ್ಧದ ಅಭಿಯಾನ” ಸ್ಪಷ್ಟ ದಾಖಲೆಗಳೊಂದಿಗೆ ಬಹಿರಂಗಪಡಿಸಿದೆ. ಈ ಅಭಿಯಾನವು, ವಕೀಲರು, ಸಂಶೋಧಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಒಳಗೊಂಡ ಸಾಮೂಹಿಕ ತಂಡವಾಗಿದೆ ಎಂದು “ದಿ ವೈರ್” ವರದಿಮಾಡಿದೆ.

ಅಭಿಯಾನವು ಬಿಡುಗಡೆಗೊಳಿಸಿದ 188 ಪುಟಗಳ ವಿವರವಾದ ವರದಿಯಲ್ಲಿ, ಕೋಮು ದ್ವೇಷವನ್ನು ಹಬ್ಬಲು ಮತ್ತು ದೇಶದಲ್ಲಿ ದ್ವೇಷದ ಭಾಷಣವನ್ನು ಉತ್ತೇಜಿಸಲು ಬಳಸಲಾದ ವಿಭಿನ್ನ ಘಟನೆಗಳನ್ನು ಬಹಿರಂಗಪಡಿಸಲಾಗಿದೆ.

‘ದ್ವೇಷದ ಅಭಿಯಾನ: ಅಂಧಾಕಾರದಲ್ಲಿ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ವರದಿಯು ಕನ್ನಡ ಚಾನೆಲ್‌ಗಳು ಮತ್ತು ಪತ್ರಿಕೆಗಳನ್ನು ವಿಶ್ಲೇಷಿಸಿದೆ. ಮಾತ್ರವಲ್ಲ ಅವುಗಳ ಆದಾಯದ ಮಾದರಿ, ಮಾಲೀಕತ್ವ ಮತ್ತು ಅವರ ರಾಜಕೀಯ ಸಿದ್ಧಾಂತವನ್ನು ಅಧ್ಯಯನ ಮಾಡಿದೆ. ಕಳೆದ ವರ್ಷದಲ್ಲಿ ಎಷ್ಟು ಪ್ರಮುಖ ಸುದ್ದಿಗಳನ್ನು ಇವು ಪ್ರಸಾರ ಮಾಡಿವೆ ಎಂಬ ವಿಶ್ಲೇಷಣೆಯನ್ನೂ ಮಾಡಲಾಗಿದೆ ಎಂದು “ದಿ ವೈರ್” ತಿಳಿಸಿದೆ.
ಟಿವಿ 9 ಕನ್ನಡ, ಸುವರ್ಣ ನ್ಯೂಸ್, ನ್ಯೂಸ್ 18 ಕನ್ನಡ, ದಿಗ್ವಿಜಯ ನ್ಯೂಸ್, ಪಬ್ಲಿಕ್ ಟಿವಿ, ಕಸ್ತೂರಿ ನ್ಯೂಸ್, ಬಿಟಿವಿ, ಟಿವಿ 5 ಮತ್ತು ರಾಜ್ ನ್ಯೂಸ್ ಮತ್ತು ವಿಜಯ ಕರ್ನಾಟಕ, ವಿಜಯವಾಣಿ, ಉದಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಎಂಬ ಏಳು ಪತ್ರಿಕೆಗಳ ವರದಿಗಳನ್ನು ಕೂಡ ಈ “ದ್ವೇಷ ಅಭಿಯಾನ” ವರದಿಯು ಸೂಕ್ಷ್ಮವಾಗಿ ವಿಶ್ಲೇಷಿಸಿದೆ.

ವರದಿಯ ಕರಡು ತಂಡದ ಸದಸ್ಯರಲ್ಲಿ ಸ್ವಾತಿ ಶಿವಾನಂದ್, ಕಿಶೋರ್ ಗೋವಿಂದ, ಮಾನವಿ ಅತ್ರಿ, ಮುಹಮ್ಮದ್ ಅಫೀಫ್, ಮತ್ತು ಅರವಿಂದ್ ನಾರಾಯಣ್ ಇದ್ದಾರೆ. ಈ ತಂಡವು ಸುದ್ದಿಗಳ ವಿವರವಾದ ವಿಶ್ಲೇಷಣೆಯೊಂದಿಗೆ ಬಲಪಂಥೀಯ ರಾಜಕೀಯ ಸಿದ್ಧಾಂತಕ್ಕೆ ಅನುಕೂಲಕರವಾಗಿ ಬಿಜೆಪಿ ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತಿರುವ ದಕ್ಷಿಣ ಭಾರತದ ಏಕೈಕ ರಾಜ್ಯವಾಗಿರುವ ಕರ್ನಾಟಕದ ಹಲವಾರು ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರನ್ನು ಕೂಡ ಸಂದರ್ಶಿಸಿ ಅವರ ಅಭಿಪ್ರಾಯ ಪಡೆದುಕೊಂಡಿದೆ. ದೇಶದಲ್ಲಿ ಕೊರೊನಾ ಸೋಂಕು ಹಬ್ಬುವುದರೊಂದಿಗೆ, ಇಲ್ಲಿನ ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸುವ ಪ್ರವೃತ್ತಿ ಭರದಿಂದ ಸಾಗಿದೆ ಎಂದು ವರದಿ ಹೇಳುತ್ತದೆ. ಈ ಪ್ರಕ್ರಿಯೆಯು ಸಿಎಎ ವಿರೋಧಿ ಪ್ರತಿಭಟನಕಾರರ ವಿಷಯದಲ್ಲೂ ಮುಂದುವರಿದಿದ್ದು, ಅವರನ್ನು ರಾಷ್ಟ್ರ ವಿರೋಧಿಗಳೆಂದು ಬಿಂಬಿಸಿತು ಎಂದು ವರದಿ ಹೇಳುತ್ತದೆ ಎಂದು ವೈರ್ ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಎಎ ಜಾರಿಗೆ ಬಂದಾಗಿನಿಂದ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶಾದ್ಯಂತ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಅನ್ನು ವಿರೋಧಿಸಿ ಭಾರತದಾದ್ಯಂತ ಪ್ರತಿಭಟನೆಗಳು ನಡೆದವು.

ಕರ್ನಾಟಕದಲ್ಲಿ, ಹಲವು ವ್ಯಕ್ತಿಗಳು ಮತ್ತು ನಾಗರಿಕ ಸಂಘಟನೆಗಳು ಈ ಕಾನೂನುಗಳ ವಿರುದ್ಧ ತಮ್ಮ ಪ್ರತಿಭಟನೆಗಳನ್ನು ತೀವ್ರಗೊಳಿಸಿದ್ದವು. ಬೆಂಗಳೂರು ಒಂದರಲ್ಲೇ ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಸದಸ್ಯರು ನೂರಾರು ಪ್ರತಿಭಟನೆಗಳನ್ನು ಆಯೋಜಿಸಿದ್ದರು. 19 ವರ್ಷದ ಪದವಿಪೂರ್ವ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಈ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಮತ್ತು ಜನರನ್ನು ಸಂಘಟಿಸುತ್ತಿದ್ದ ಮುಂಚೂಣಿಯಲ್ಲಿದ್ದ ಓರ್ವ ಯುವತಿಯಾಗಿದ್ದಳು.

ಮಾಧ್ಯಮಗಳು ಆಕೆಯನ್ನು ಗೊಂದಲಮಯವಾಗಿ ಬಿಂಬಿಸಿ, ಆಕೆ “ರಾಷ್ಟ್ರ ವಿರೋಧಿ” ಎಂದು ತೀರ್ಪು ನೀಡಿದವು. “ಅಮೂಲ್ಯ ಲಿಯೋನ್ ವಿಷಯದಲ್ಲಿ, ಮಾಧ್ಯಮಗಳ ಮಾನಹಾನಿ ತೀವ್ರತರವಾಗಿತ್ತು. ಆಕೆಯ ಜೀವಕ್ಕೆ ಅಪಾಯವನ್ನುಂಟುಮಾಡುವ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಕೂಡ ಬಹಿರಂಗಪಡಿಸುವ ರೀತಿಯಲ್ಲಿ ವರದಿಗಳು / ಸುದ್ದಿಗಳು ಪ್ರಸಾರವಾದವು. ಮಾತ್ರವಲ್ಲ, ಆಕೆಯ ತಂದೆ, ತನ್ನ ಮಗಳ ಕೃತ್ಯವನ್ನು ಖಂಡಿಸುವ ವಿಡಿಯೋ ತುಣುಕನ್ನು ಸಹ ಪದೇ ಪದೇ ಪ್ರಸಾರ ಮಾಡಲಾಯಿತು ಎಂದು ವರದಿ ಹೇಳಿದೆ.

ತಮಗೆ ಜೀವ ಬೆದರಿಕೆ ಬಂದ ನಂತರ ಆಕೆಯ ತಂದೆ, ಮಗಳ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ ಈ ವಿಷಯವನ್ನು ಯಾವುದೇ ಮಾಧ್ಯಮ ತೋರಿಸಿಲ್ಲ ಎಂದು ವರದಿ ಹೇಳುತ್ತದೆ. ಆಕೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದನ್ನೇ, ಪ್ರಾಮುಖ್ಯತೆ ನೀಡಿ ಪ್ರಸಾರ ಮಾಡಲಾಯಿತು.

‘ಮುಸ್ಲಿಂ, ದಲಿತ, ಕಾಶ್ಮೀರ, ಟ್ರಾನ್ಸ್, ಆದಿವಾಸಿ, ಫ್ರೀಡಂ, ಫ್ರೀಡಂ, ಫ್ರೀಡಂ, ಎಂದು ಬರಹಗಳುಳ್ಳ ಭಿತ್ತಿಪತ್ರ ಹಿಡಿದಿದ್ದ ಮತ್ತೊರ್ವ ಕಾರ್ಯಕರ್ತೆ ಆರ್ದ್ರಾ ನಾರಾಯಣ್ ಇದೇ ರೀತಿಯ ಪ್ರತಿಕ್ರಿಯೆಗಳನ್ನು ಎದುರಿಸಿದರು. ಭಿತ್ತಿಪತ್ರ ಶೀರ್ಷಿಕೆಯಲ್ಲಿ ಕಾಶ್ಮೀರ ಪದ ಇರುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು. ಆಕೆ ಪಾಕಿಸ್ತಾನ ಜಿಂದಾಬಾದ್ ಘೋಷಣೆಯನ್ನು ಕೂಗಿಲ್ಲ ಎಂಬ ಪೊಲೀಸರ ಸ್ಪಷ್ಟೀಕರಣದ ಹೊರತಾಗಿಯೂ ಅರ್ದ್ರಾ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾಳೆ ಎಂದು ಕನ್ನಡ ಮಾಧ್ಯಮಗಳು ವರದಿ ಮಾಡಿದವು.

ಒಂದು ಸಂದರ್ಭದಲ್ಲಿ ಪಬ್ಲಿಕ್ ಟಿವಿಯಲ್ಲಿ ವರದಿಗಾರ ಫೋನ್ ಇನ್ ಸಂಪರ್ಕದಲ್ಲಿದ್ದಾಗ, ಸಂಪರ್ಕ ಕಡಿತಗೊಂಡಿದ್ದು, ಈ ವೇಳೆ ಆಂಕರ್ ಕನ್ನಡದಲ್ಲಿ, “ಹೆಚ್ಚಿನವರು ಬೆಂಗಳೂರಿನಲ್ಲಿ ಸ್ವಂತ ಮನೆ ಇರಬೇಕು ಎಂದು ಬಯಸುತ್ತಾರೆ. ಆದರೆ ಇಲ್ಲಿ, ಆಕೆಗೆ ಮನೆಯಲ್ಲಿ ಅಜ್ಜ, ಅಜ್ಜಿ, ತಾಯಿ ಮತ್ತು ತಂದೆ ಇದ್ದರೂ, ತನ್ನ ಮನೆಯನ್ನು ತೊರೆದು ಎರಡು ವರ್ಷಗಳ ಕಾಲ ಬೇರೆಡೆ ಇದ್ದಳು. ಇದರ ಅರ್ಥವೇನು?” ಎಂದು ಕೇಳುತ್ತಾರೆ.
ಈ ಎರಡೂ ಘಟನೆಗಳಲ್ಲಿ, “ಪಿತೃಪ್ರಧಾನ ಮತ್ತು ಲಿಂಗ ತಾರತಮ್ಯತೆಯನ್ನು” ಹಲವು ಆಂಕರ್ ಗಳು ತಮ್ಮ ಸುದ್ದಿ ನಿರೂಪಣೆಯಲ್ಲಿ ತೋರಿದ್ದಾರೆ ಎಂದು ವರದಿ ತಿಳಿಸುತ್ತದೆ. ಲಿಯೋನಾಳನ್ನು “ದಾರಿ ತಪ್ಪಿದ ಮಗಳು” ಎಂದು ತೋರಿಸಿದರೆ, ಆರ್ದ್ರಾ ನಾರಾಯಣ್ ಅವರ ಪಿಜಿಯಲ್ಲಿದ್ದ ಸ್ನೇಹಿತರನ್ನು “ಕೆಟ್ಟ ಸ್ನೇಹಿತರು” ಎಂಬಂತೆ ಬಿಂಬಿಸಲಾಯಿತು. ಸ್ನೇಹಿತರ ಸಹವಾಸದಿಂದ ಆಕೆ ಕೆಟ್ಟಿದ್ದಾಳೆ ಎಂದು ವ್ಯಾಖ್ಯಾಸಲಾಯಿತು.

ಪಾಕಿಸ್ತಾನ ಪರವಾಗಿ ಹೇಳಿಕೆ ಇರುವ ವೀಡಿಯೊವನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಾದ ಅಮೀರ್ ಮೊಹಿಯುದ್ದೀನ್ ವಾನಿ, ಬಾಸಿತ್ ಆಶಿಕ್ ಸೋಫಿ ಮತ್ತು ತಾಲಿಬ್ ಮಜೀದ್ ವಾನಿ ಎಂಬವರನ್ನು ಬಂಧಿಸಿದಾಗ, ಪಬ್ಲಿಕ್ ಟಿವಿ ಅವರನ್ನು “ಪಿಶಾಚಿಗಳು” ಎಂದು ಕರೆದು ಪಾಕಿಸ್ತಾನಕ್ಕೆ ಕಳುಹಿಸುವಂತೆ ಹೇಳುತ್ತದೆ. “ಇವರು ನಿಜವಾದ ದೇಶದ್ರೋಹಿಗಳು” ಎಂದು ಆಂಕರ್ ಘೋಷಿಸಿದ್ದರು ಎಂದು ವರದಿ ತಿಳಿಸುತ್ತದೆ.

ಮೈಸೂರು ಮೂಲದ ಸ್ಟಾರ್ ಆಫ್ ಮೈಸೂರು ಎಂಬ ಪತ್ರಿಕೆ ಇನ್ನೂ ಹೆಚ್ಚು ಅಪಾಯಕಾರಿಯಾಗಿ ವರ್ತಿಸಿತು. ‘ಬುಟ್ಟಿಯಲ್ಲಿ ಕೆಟ್ಟ ಸೇಬುಗಳು’ ಎಂಬ ಶೀರ್ಷಿಕೆಯಡಿ ಬರೆದ ಸಂಪಾದಕೀಯದಲ್ಲಿ, ಅಲ್ಪಸಂಖ್ಯಾತ ಸಮುದಾಯವನ್ನು “ನಿರ್ಮೂಲನೆ” ಮಾಡುವಂತೆ ಒತ್ತಾಯಿಸಿತ್ತು.
ಪ್ರೀತಿ ನಾಗರಾಜ್ ಅವರು “ದಿ ವೈರ್ “ ಗೆ ಬರೆದ ತಮ್ಮ ಲೇಖನದ ವಿಶ್ಲೇಷಣೆಯನ್ನು ಈ ವರದಿಯು ಉಲ್ಲೇಖಿಸಿದೆ.

“ಇಂದು, ಕನ್ನಡದ ಬಹುಪಾಲು ಮಾಧ್ಯಮಗಳನ್ನು ಆಡಳಿತರೂಡರ ಸಿದ್ಧಾಂತದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಕಂಪನಿಗಳು / ವ್ಯಕ್ತಿಗಳು ನಡೆಸುತ್ತಿದ್ದಾರೆ. ನಕಲಿ ಸುದ್ದಿಗಳು ಅಥವಾ ಕಲ್ಪಿತ ಸುದ್ದಿಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಎಂದು ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಈಗ ಆನ್‌ಲೈನ್ ವರದಿ, ಆಫ್‌ಲೈನ್ ಮೇಲೂ ಹೆಚ್ಚಿನ ಪರಿಣಾಮಗಳನ್ನು ಬೀರಿದೆ ಎಂದು ವರದಿ ಹೇಳುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ, ಗುರಿಯಾಗಿಸಲ್ಪಟ್ಟ ವ್ಯಕ್ತಿಗಳು ಮತ್ತು ಸಮುದಾಯಗಳು ರಾಜ್ಯದಲ್ಲಿ ವಾಸಿಸಲು ತೊಂದರೆ ಅನುಭವಿಸಿವೆ. ಬಂಧನದ ಸಂದರ್ಭದಲ್ಲಿ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಕಾನೂನು ಸಹಾಯಕರನ್ನು ಹುಡುವುದರಲ್ಲೂ ತೊಂದರೆ ಅನುಭವಿಸಿದ್ದಾರೆ.

ಕಾಶ್ಮೀರಿ ವಿದ್ಯಾರ್ಥಿಗಳ ವಿಷಯದಲ್ಲಿ, ವರದಿ ಈ ರೀತಿ ಗಮನಿಸುತ್ತದೆ:
ಕಾಶ್ಮೀರಿ ವಿದ್ಯಾರ್ಥಿಗಳ ಪ್ರಕರಣದಲ್ಲಿ, ವರದಿ ಈ ರೀತಿ ಹೇಳುತ್ತದೆ; ” ಟೈರ್ ಸುಡುವುದು, ಬಹಿರಂಗ ಮರಣದಂಡನೆ, ತಲೆ ಕಡಿದವರಿಗೆ ಬಹುಮಾನ ಘೋಷಣೆ, ಕಾನೂನು ನೆರವು ನೀಡದಂತೆ ಕರೆ ಮತ್ತು ವಕೀಲಿಕೆ ನಡೆಸದಂತೆ ಒತ್ತಾಯ ಮುಂತಾದವುಗಳೊಂದಿಗೆ ಹುಬ್ಬಳ್ಳಿ ಘಟನೆ ವಿರುದ್ಧದ ಪ್ರತಿಭಟನೆಯನ್ನು ಮಾಧ್ಯಮ ಪ್ರಸಾರ ಮಾಡಿತು. ಹಿಂಸಾಚಾರದ ಬೆದರಿಕೆ ಹಾಕಿದ ಮತ್ತು ಬೆಳಗಾವಿಗೆ ಸ್ಥಳಾಂತರಿಸುವಾಗ ವಿದ್ಯಾರ್ಥಿಗಳ ಮೇಲೆ ಬೂಟುಗಳನ್ನು ಎಸೆದ ಬಲಪಂಥೀಯ ಪ್ರತಿಭಟನಕಾರ ವಿಡಿಯೋವನ್ನು ಹಲವು ಬಾರಿ ಪ್ರಸಾರ ಮಾಡಲಾಯಿತು ಎಂದು ವರದಿ ಹೇಳಿದೆ.

ಆದರೆ ಇಲ್ಲಿ ಸುದ್ದಿ ನಿರೂಪಕರು ಹಿಂಸಾಚಾರವನ್ನು ಪ್ರಶ್ನಿಸಲಿಲ್ಲ. ವಾಸ್ತವವಾಗಿ, ಇಲ್ಲಿ ಹಿಂಸಾಚಾರದ ನಡವಳಿಕೆಯನ್ನು ಮೌನವಾಗಿ ಸಮ್ಮಸಲಾಗಿದೆ ಎಂದು ವರದಿ ಹೇಳುತ್ತದೆ.

ವರದಿಯು ದ್ವೇಷದ ಭಾಷಣವನ್ನು ಎರಡು ಸಂದರ್ಭಗಳಲ್ಲಿ ವಿಶ್ಲೇಷಿಸುತ್ತದೆ, ಮೊದಲು ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ಕೊರೊನಾ ಸೋಂಕು ವಿಷಯದಲ್ಲಿ ತಬ್ಲೀಗ್ ಜಮಾಅತ್ ನ ಮೇಲಿನ ಆರೋಪಗಳ ವಿಷಯದಲ್ಲಿ ವಿಶ್ಲೇಷಣೆ ನಡೆಸಲಾಗಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ತಬ್ಲೀಗ್ ಜಮಾಅತ್ ಸದಸ್ಯರನ್ನು ನಿಂದಿಸುವುದು ಮತ್ತು ಕಿರುಕುಳ ನೀಡಿರುವುದು, ದೇಶಾದ್ಯಂತ ಸಾಮಾನ್ಯ ಮುಸ್ಲಿಮರ ವಿರುದ್ಧ ಬಹಿಷ್ಕಾರ ಮತ್ತು ದೈಹಿಕ ಹಲ್ಲೆಗಳಂತಹ ಘಟನೆಗಳು ಕೂಡ ನಡೆದಿವೆ ಎಂದು ವರದಿ ಹೇಳಿವೆ. ಸುವರ್ಣ ನ್ಯೂಸ್, ಕೊರೊನಾ ವೈರಸ್ ಅನ್ನು “ತಬ್ಲೀಗ್ ವೈರಸ್” ಎಂದು ಕರೆಯುವ ಮಟ್ಟಿಗೆ ಹೋಗಿದೆ.

ವರದಿ ಹೀಗೆ ಹೇಳುತ್ತದೆ: ತಬ್ಲೀಗ್ ಜಮಾಅತ್ ವಿಷಯದಲ್ಲಿ ಇಡೀ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಭಾಷಣದ ಮೂಲಕ ದ್ವೇಷ ಹರಡಲಾಯಿತು. ಮುಸ್ಲಿಮರ ವಿರುದ್ಧ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರ ಘೋಷಿಸಲಾಯಿತು. ಕೆಲವೆಡೆ ಮುಸ್ಲಿಮರ ವಿರುದ್ಧದ ದೈಹಿಕ ಹಿಂಸಾಚಾರದಂತಹ ಘಟನೆಗಳು ನಡೆದವು. ಈ ಅವಧಿಯಲ್ಲಿ ನಡೆದ ದ್ವೇಷದ ಭಾಷಣ ನರಮೇಧಕ್ಕೆ ಸ್ಪಷ್ಟವಾದ ಪ್ರಚೋದನೆಯಾಗಿತ್ತು ಮತ್ತು ಮುಸ್ಲಿಮರನ್ನು ಎರಡನೇ ದರ್ಜೆಯ ಪೌರರನ್ನಾಗಿಸುವ ಪ್ರಯತ್ನ ನಡೆಯಿತು.

ಹೆಚ್ಚಿನ ಕನ್ನಡ ಮಾಧ್ಯಮಗಳಲ್ಲಿ, ತಬ್ಲೀಗ್ ಜಮಾಅತ್ ವಿಷಯದ ಸುದ್ದಿ ವಿಶ್ಲೇಷಣೆಯ ಪ್ರಸಾರದಲ್ಲಿ ‘ಶೈತಾನ್’, ಮತ್ತು ‘ಕೊರೋನಾ ಅಪರಾಧಿಗಳು’, ‘ತಬ್ಲೀಗ್ ವೈರಸ್’ ಮತ್ತು ‘ಕೊರೋನಾ ಜಿಹಾದ್’ ನಂತಹ ಪ್ರಚೋದನಕಾರಿ ಪದಗಳನ್ನು ಬಳಸಿ ವಿಶೇಷ ಕಾರ್ಯಕ್ರಮ ಪ್ರಸಾರವಾಯಿತು. ಮಾತ್ರವಲ್ಲ ಗ್ರಾಫಿಕ್ಸ್ ಗಳ ಮೂಲಕ, ಅತಿಥಿಗಳು ಮತ್ತು ರಾಜಕೀಯ ನಾಯಕರ ಹೇಳಿಕೆಗಳ ಮೂಲಕ ಅದನ್ನು ಇನ್ನಷ್ಟು ಪ್ರಚೋದನಾಕಾರಿಯಾಗಿಸಲಾಯಿತು ಎಂದು ವರದಿ ಹೇಳುತ್ತದೆ.

ಚಾನೆಲ್‌ಗಳು ಮತ್ತು ಪತ್ರಿಕೆಗಳು ರಾಜಕೀಯ ನಾಯಕರಿಗೆ ಈ ಸಂದರ್ಭದಲ್ಲಿ ಯಾವುದೇ ಹೊಣೆಗಾರಿಕೆಯಿಲ್ಲದೆ ಅತ್ಯಂತ ಕೆಟ್ಟ ಟೀಕೆಗಳನ್ನು ಮಾಡಲು ಮುಕ್ತವಾಗಿ ಅವಕಾಶ ಕಲ್ಪಿಸಿದವು. ಸುವರ್ಣ ಟಿವಿಗೆ ನೀಡಿದ ಸಂದರ್ಶನದಲ್ಲಿ, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ತಬ್ಲೀಗ್ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಳ್ಳುವವರು ‘ಕೊರೋನಾ ಜಿಹಾದ್’ ನಲ್ಲಿ ಭಾಗಿಯಾಗಿದ್ದಾರೆಂದು ಹೇಳಿಕೆ ನೀಡಿದರೆ, ಮತ್ತೊಂದು ಮಾಧ್ಯಮದಲ್ಲಿ, ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ, ಕೊರೊನಾ ವೇಗವಾಗಿ ಹರಡುವುದನ್ನು ಇಸ್ಲಾಂ ಧರ್ಮದೊಂದಿಗೆ ಹೋಲಿಸಿ ಹೇಳಿಕೆ ನೀಡಿದ್ದರು. ಈ ಆರೋಪಗಳನ್ನು “ಸುದ್ದಿಗಳು” ಎಂಬ ರೀತಿಯಲ್ಲಿ ಪ್ರಸಾರ ಮಾಡಲಾಯಿತು. ಈ ಆರೋಪಗಳ ಬಗ್ಗೆ ಪ್ರತಿ ಹೇಳಿಕೆಗಳನ್ನು ಸಹ ಪ್ರಸಾರ ಮಾಡುವ ಯಾವುದೇ ಪ್ರಯತ್ನ ಮಾಡಲಾಗಿಲ್ಲ ಎಂದು ವರದಿ ಹೇಳುತ್ತದೆ.

ಸಂಶೋಧಕರು ಈ ಮಾಧ್ಯಮ ಸಂಸ್ಥೆಗಳ ಮಾಲೀಕರು ಮತ್ತು ಸಂಪಾದಕರ ಜಾತಿಯನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಹೆಚ್ಚಿನ ನ್ಯೂಸ್‌ರೂಮ್‌ಗಳು ಬ್ರಾಹ್ಮಣರ ಒಂದು ಉಪಜಾತಿಗೆ ಸೇರಿದ ಸಂಪಾದಕರ ನೇತೃತ್ವದಲ್ಲಿ ನಡೆಯುತ್ತಿರುವುದನ್ನು ಅವರು ಕಂಡುಹಿಡಿದಿದ್ದಾರೆ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕರ್ನಾಟಕದ ಕೊಡಗು ಮತ್ತು ಕೇರಳದ ಕಾಸರಗೋಡು, ದಕ್ಷಿಣ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿರುವ ಕನ್ನಡ ಬ್ರಾಹ್ಮಣ ಸಮುದಾಯವಾದ ಹವ್ಯಕ ಜಾತಿಯವರು ಹೆಚ್ಚಿನ ನ್ಯೂಸ್ ರೂಮ್ ಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಸಂಶೋಧಕರು ಬೊಟ್ಟು ಮಾಡಿದ್ದಾರೆ.

ಈ ಸಮುದಾಯ, ಸಾಂಪ್ರದಾಯಿಕವಾಗಿ ಆರ್‌ಎಸ್‌ಎಸ್‌ನೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ ಮತ್ತು ಸಮುದಾಯದ ಅನೇಕ ಸದಸ್ಯರು ಮಾಧ್ಯಮಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಹಲವು ವರ್ಷಗಳಿಂದ ಅದರ ಸಿದ್ಧಾಂತವನ್ನು ಸಮರ್ಥಿಸುತ್ತಿದ್ದಾರೆ ಎಂದು ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರ ಶಿವಸುಂದರ್ ಹೇಳುತ್ತಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group