ವರದಿಗಾರ (ಸೆ.23): ಈಶಾನ್ಯ ದೆಹಲಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಜಾರಿಗೊಳಿಸಿದ ಸಮನ್ಸ್ ಗೆ ಉತ್ತರಿಸದ ಫೇಸ್ಬುಕ್ ಭಾರತದ ಉಪಾಧ್ಯಕ್ಷರ ವಿರುದ್ಧ ಅಕ್ಟೋಬರ್ 15ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಬುಧವಾರ ದೆಹಲಿ ವಿಧಾನಸಭೆಗೆ ಆದೇಶಿಸಿದೆ.
ಫೇಸ್ಬುಕ್ ಭಾರತದ ಉಪಾಧ್ಯಕ್ಷ ಎಂ.ಡಿ.ಅಜಿತ್ ಮೋಹನ್ ಅವರಿಗೆ ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾ ನೇತೃತ್ವದ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದತೆ ಕುರಿತ ಸಮಿತಿ ಸಮನ್ಸ್ ಜಾರಿಗೊಳಿಸಿತ್ತು.
ಗಲಭೆಗೆ ಸಂಬಂಧಿಸಿದ ಬಿಜೆಪಿ ನಾಯಕ ದ್ವೇಷದ ಹೇಳಿಕೆಗಳನ್ನು ತಿದ್ದುಪಡಿ ಮಾಡದೆ ಪ್ರಸಾರ ಮಾಡಿದ ಆರೋಪವನ್ನು ಫೇಸ್ ಬುಕ್ ಎದುರಿಸುತ್ತಿದೆ.
ಇದನ್ನು ಪ್ರಶ್ನಿಸಿ ಫೇಸ್ಬುಕ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಫೇಸ್ಬುಕ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಲ್ವೆ ವಾದ ಮಂಡಿಸಿದ್ದರು. ಸಮಿತಿಯ ಸಮನ್ಸ್ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆರೋಪಿಸಿದ್ದರು.
ಈ ಪ್ರಕರಣ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಸರ್ಕಾರಕ್ಕೆ ಅದನ್ನು ಪ್ರಶ್ನಿಸುವ ಅಧಿಕಾರವಿಲ್ಲ ಎಂದಿದ್ದರು. ಈ ಸಂಬಂಧ ನ್ಯಾಯಮೂರ್ತಿ ಸಂಜಯ್ ಕಿಷನ್ ಕೌಲ್ ನೇತೃತ್ವದ ನ್ಯಾಯಪೀಠ, ದೆಹಲಿ ವಿಧಾನಸಭಾ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ.
