ವರದಿಗಾರ (ಸೆ.23): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಕ್ಕಳು ಮತ್ತು ಮೊಮ್ಮಕ್ಕಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಮೂಲಕ 666.22 ಕೋಟಿ ರೂ.ಲಂಚ ಪಡೆದಿದ್ದು, ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಾರ್ಟ್ ಮೆಂಟ್ ಕಾಮಗಾರಿಯಲ್ಲಿ ಬಿಡಿಎ ಆಯುಕ್ತರ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಲಂಚ ಪಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಅಥವಾ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಬೇಕು. ತನಿಖೆ ನಡೆಯುವವರೆಗೂ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪನವರು ಈ ಹಿಂದೆ ಚೆಕ್ ಮೂಲಕ ಲಂಚ ಪಡೆದಿದ್ದರು. ಈ ಬಾರಿ ಆರ್ ಟಿಜಿಎಸ್ ಮೂಲಕ ಪಡೆದಿದ್ದಾರೆ. ಇವರಿಗೆ ಭ್ರಷ್ಟಾಚಾರ ಮಾಡಲು ಎಷ್ಟು ಆತುರವಿದೆ ಎಂದರೆ ಬ್ಯಾಂಕ್ ವ್ಯವಹಾರದ ಮೂಲಕವೇ ಲಂಚ ಪಡೆಯುತ್ತಿದ್ದಾರೆ. ವಿಜಯೇಂದ್ರ ಅವರು ತಮಗೆ ಬಿಡಿಎ ಆಯುಕ್ತ ಹಣ ನೀಡಿಲ್ಲ ಎಂದು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿದೆ. ಇಷ್ಟೆಲ್ಲಾ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದ್ದರೂ ಅವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಹೋದ ಕಡೆಯಲ್ಲೆಲ್ಲಾ ‘ನಾನು ಲಂಚ ತಿನ್ನುವುದಿಲ್ಲ, ಬೇರೆಯವರು ತಿನ್ನಲು ಬಿಡುವುದಿಲ್ಲ’ಎಂದು ಹೇಳುತ್ತಾರೆ. ಈ ಲಂಚದ ಆರೋಪದಲ್ಲಿ ಪ್ರಮುಖ ಆರೋಪಿಯಾಗಿರುವ ವಿಜಯೇಂದ್ರ ಅವರನ್ನೇ ಮೋದಿ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಪಕ್ಷದ ಉಪಾಧ್ಯಕ್ಷರೇ ಭ್ರಷ್ಟಾಚಾರದಲ್ಲಿ ತೊಡಗಿರುವಾಗ, ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡಿದವರಿಗೆ ರಕ್ಷಣೆ ನೀಡಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯ ಸಂಪೂರ್ಣ ವೀಡಿಯೋ:
ಪತ್ರಿಕಾಗೋಷ್ಠಿ, ಕೆಪಿಸಿಸಿ ಕಚೇರಿ.
ರಣದೀಪ್ ಸಿಂಗ್ ಸುರ್ಜೆವಾಲ ಅವರಿಂದ ಪತ್ರಿಕಾಗೋಷ್ಠಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಸ್ ಆರ್ ಪಾಟೀಲ್, ದಿನೇಶ್ ಗುಂಡೂರಾವ್, ಹೆಚ್ ಕೆ ಪಾಟೀಲ್, ಕೃಷ್ಣ ಬೈರೇಗೌಡ, ಕಾರ್ಯಾಧ್ಯಕ್ಷರುಗಳಾದ ಸತೀಶ್ ಜಾರಕಿಹೋಳಿ, ಈಶ್ವರ್ ಖಂಡ್ರೆ, ಸಲೀಂ ಅಹಮದ್ ಹಾಗೂ ನಾಯಕರುಗಳು ಉಪಸ್ಥಿತಿ.ಕೆಪಿಸಿಸಿ ಕಚೇರಿ.#BSY_Must_Resign#VijayendraServiceTax
Posted by Indian National Congress – Karnataka on Tuesday, September 22, 2020
ಈ ಪ್ರಕರಣ ತನಿಖೆಯಾಗುವವರೆಗೂ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೆಕು. ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರೇ ಅವರನ್ನು ಈ ಸ್ಥಾನದಿಂದ ಕಿತ್ತುಹಾಕಬೇಕು. ಇದನ್ನು ಮಾಡದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವುದೇ ಒಂದು ಮಾಡುವುದೇ ಒಂದು ಎಂಬುದು ಸಾಬೀತಾಗುತ್ತದೆ ಎಂದು ಟೀಕೆ ಮಾಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಕಪ್ಪು ಹಣವನ್ನು ಬಿಳಿ ಮಾಡಲು ಕೊಲ್ಕತ್ತಾದ ಏಳು ಖಾಸಗಿ ಸಂಸ್ಥೆಗಳಿಗೆ ಹೂಡಿಕೆ ಮಾಡಿದ್ದಾರೆ. ಬೆಲ್ ಗ್ರೇವಿಯಾ ಯಡಿಯೂರಪ್ಪ ಕುಟುಂಬದ ಕಂಪನಿ. ಬಿಎಸ್ ಎಸ್ ಎಸ್ಟೇಟ್ ಪ್ರೈ,ಲಿ ಕಂಪನಿ ವಿಜಯೇಂದ್ರ, ಶಶಿಧರ, ಸಂಜಯ್ ಕಂಪನಿ. ಇವೆಲ್ಲವೂ ಹವಾಲಾ ಹಣ. ಇದರ ಬಗ್ಗೆ ಭ್ರಷ್ಟಾಚಾರ ಕಾಯದೆಯಡಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
