‘ಹಿಂದಿನ ಸರ್ಕಾರ ತಪ್ಪು ಮಾಡಿದ್ದರೆ ಅದನ್ನು ಕೂಡ ತನಿಖೆ ವ್ಯಾಪ್ತಿಗೆ ಸೇರಿಸಿ, ಉಪ್ಪು ತಿಂದವರು ನೀರು ಕುಡಿಯಲಿ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ನಾವು ಅಡ್ಡಬರುವುದಿಲ್ಲ’: ಸಿದ್ದರಾಮಯ್ಯ
ವರದಿಗಾರ (ಸೆ.23): ಕೊರೊನಾ ಉಪಕರಣ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ವಿಧಾನಸಭೆಯಲ್ಲಿಂದು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ನಿಯಮ 69ರಡಿ ನಡೆದ ಚರ್ಚೆಗೆ ಸರ್ಕಾರ ನೀಡಿದ ಉತ್ತರ ತೃಪ್ತಿಕರವಾಗಿಲ್ಲ. ವೈದ್ಯಕೀಯ ಶಿಕ್ಷಣ ಸುಧಾಕರ್ ಅವರು ಸಮರ್ಪಕ ಉತ್ತರ ನೀಡಿಲ್ಲ. ಅವರು ನೀಡಿರುವ ಉತ್ತರ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವಂತಿದೆ. ಆದ್ದರಿಂದ ಸಭಾತ್ಯಾಗ ಮಾಡುತ್ತಿರುವುದಾಗಿ ಹೇಳಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಿಂದ ಹೊರನಡೆದರು. ಅವರನ್ನು ಕಾಂಗ್ರೆಸ್ ನ ಇತರ ಸದಸ್ಯರು ಮತ್ತು ಜೆಡಿಎಸ್ ಸದಸ್ಯರು ಸಹಮತ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಸಿದ್ದರಾಮಯ್ಯ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಒಂದು ವೇಳೆ ಸರ್ಕಾರ ಹೇಳುವ ವಿಷಯ, ಅಂಕಿ-ಅಂಶ ಸತ್ಯವಾಗಿದ್ದರೆ ಸರ್ಕಾರ, ನ್ಯಾಯಾಂಗ ತನಿಖೆಗೆ ಏಕೆ ಹೆದರುತ್ತಿದೆ? ಇದು ಜನರ ಹಣ. ಆದ್ದರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಪುನರುಚ್ಚರಿಸಿದ್ದಾರೆ.
‘ಹಿಂದಿನ ಸರ್ಕಾರ ತಪ್ಪು ಮಾಡಿದ್ದರೆ ಅದನ್ನು ಕೂಡ ತನಿಖೆ ವ್ಯಾಪ್ತಿಗೆ ಸೇರಿಸಿ, ಉಪ್ಪು ತಿಂದವರು ನೀರು ಕುಡಿಯಲಿ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ನಾವು ಅಡ್ಡಬರುವುದಿಲ್ಲ’ ಎಂದು ಹೇಳಿದರು.
