Uncategorized

ವಿನಾಶ ಕಾಲಕ್ಕೆ ವಿಪರೀತ ಬುದ್ದಿ; ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ವರದಿಗಾರ (ಸೆ.22): ಕೊರೊನಾದಂತಹ ಸೂತಕದ ದಿನಗಳಲ್ಲಿ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆಗಳ ಮೂಲಕ ತರಲು ಮನುಷ್ಯತ್ವ ಇಲ್ಲದ ಸರ್ಕಾರಕ್ಕೆ ಮಾತ್ರ ಸಾಧ್ಯ. ವಿನಾಶ ಕಾಲಕ್ಕೆ ವಿಪರೀತ ಬುದ್ದಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರ ರೈತರ ಒಕ್ಕಲೆಬ್ಬಿಸಿ ಕೃಷಿ ಭೂಮಿಯನ್ನು ಕಾರ್ಪೋರೇಟ್ ಧಣಿಗಳಿಗೆ ಒಪ್ಪಿಸುವ ದುರುದ್ದೇಶದಿಂದಲೇ ರೈತರ ಹಿತಾಸಕ್ತಿ ರಕ್ಷಿಸುತ್ತಿದ್ದ ಕಾನೂನುಗಳಿಗೆ ತಿದ್ದುಪಡಿ ಮಾಡುತ್ತಿದೆ. ಕೊರೊನಾ ಸೋಂಕಿನಿಂದಾಗಿ ಜನ ಸಾವು-ನೋವಿಗೀಡಾಗಿ ದಿಕ್ಕುತೋಚದಂತಿದ್ದಾರೆ. ಭೂಸುಧಾರಣೆ ಮತ್ತು ಎಪಿಎಂಸಿ ಕಾನೂನು ತಿದ್ದುಪಡಿಯ ಸುಗ್ರೀವಾಜ್ಞೆಯೂ ಸೇರಿದಂತೆ ಎಲ್ಲ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆಸುತ್ತಿರುವ ರೈತ, ದಲಿತ ಮತ್ತು ಕಾರ್ಮಿಕರ ಐಕ್ಯ ಹೋರಾಟಕ್ಕೆ ನನ್ನ ಬೆಂಬಲ ಇದೆ, ಅನ್ನದಾತನ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಕೊರೊನಾ ನಂತರದ ಬದುಕಿನ ಏಕೈಕ ಆಶಾಕಿರಣ ಕೃಷಿಕ್ಷೇತ್ರ ಎಂದು ಜ್ಞಾನೋದಯವಾಗುವ ಹೊತ್ತಿನಲ್ಲಿಯೇ ಅದನ್ನು ನಾಶ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡವಳಿಕೆ ಕೊರೊನಾ ವೈರಸ್ ಗಿಂತಲೂ ಮಾರಣಾಂತಿಕ ಎಂದು ಟೀಕಿಸಿದ್ದಾರೆ.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ತಿದ್ದುಪಡಿ, ಪ್ರಮುಖ ಬೆಳೆಗಳನ್ನು ಅಗತ್ಯವಸ್ತುಗಳ ಕಾಯ್ದೆಯಿಂದ ಹೊರಗಿಡುವ ತಿದ್ದುಪಡಿ, ಬೀಜ-ಗೊಬ್ಬರಗಳ ಮೇಲೆ ಜಿಎಸ್ ಟಿ.. ಹೀಗೆ ರೈತರ ಮೇಲೆ ಪ್ರಹಾರ ಮಾಡುತ್ತಾ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ರೈತರಿಂದ ಭೂಮಿಯನ್ನೇ ಕಿತ್ತುಕೊಳ್ಳಲು ಹೊರಟಿವೆ. ಕೃಷಿ ಕ್ಷೇತ್ರದ ತಿದ್ದುಪಡಿಗಳು ಹೊಸತೂ ಅಲ್ಲ, ಅಕಸ್ಮಿಕವೂ ಅಲ್ಲ ಇವು ಈಗಾಗಲೇ ನರೇಂದ್ರ ಮೋದಿ ಸರ್ಕಾರ ಜಾರಿ ಮಾಡುತ್ತಿರುವ ಹಲವಾರು ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ಕೃಷಿ ನೀತಿಗಳ ಭಾಗವಾಗಿದೆ. ಉದ್ಯಮಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶದಿಂದಲೇ ಈ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ರೈತರ ಹಿತದೃಷ್ಟಿಯ ಲವಲೇಶವೂ ಇಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ತಿದ್ದುಪಡಿಗಳಿಂದಾಗಿ ಭಾರತದ ಕೃಷಿಕ್ಷೇತ್ರದ ಮೇಲೆ ಬಹುರಾಷ್ಟ್ರೀಯ ಕಂಪನಿಗಳು (MNC) ಗಳ ಹಿಡಿತ ಹೆಚ್ಚಾಗಲಿದೆ. ಭಾರತದ ಆಹಾರ ಸ್ವಾವಲಂಬನೆ ಮತ್ತು ಆಹಾರ ಸಾರ್ವಭೌಮತೆ ಕ್ರಮೇಣ ನಾಶವಾಗುತ್ತದೆ. ಭೂ ಸುಧಾರಣೆ ಕಾಯ್ದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಇನ್ನಷ್ಟು ಬಲಪಡಿಸಿದ್ದರು. ಯಡಿಯೂರಪ್ಪ ಅವರ ಸರ್ಕಾರ ಉಳುವವನನ್ನು ಒಕ್ಕಲೆಬ್ಬಿಸಲು ಹೊರಟಿದೆ. ಹಸಿರು ಶಾಲು ಹೊದ್ದುಕೊಂಡು ತಾನೊಬ್ಬ ರೈತ ನಾಯಕ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದಿರುವ ಬಿ.ಎಸ್ ಯಡಿಯೂರಪ್ಪ ಅವರ ಮುಖವಾಡ ಕಳಚಿ ಬಿದ್ದಿದೆ. ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರನ್ನು ಗುಂಡಿಕ್ಕಿ ಕೊಂದರು, ಈಗ ಅವರಿಂದ ಭೂಮಿ ಕಿತ್ತುಕೊಂಡು ಸಾಯಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯೂ ಸೇರಿದಂತೆ ರೈತವಿರೋಧಿಯಾದ ಎಲ್ಲ ಮಸೂದೆಗಳನ್ನು ನಮ್ಮ ಪಕ್ಷ ಸದನದ ಒಳಗೆ ಮತ್ತು ಹೊರಗೆ ಬಲವಾಗಿ ವಿರೋಧಿಸಲಿದೆ. ಈ ಬಗ್ಗೆ ನಮ್ಮ ಕಾರ್ಯಕರ್ತರು ರೈತರಿಗೆ ತಿಳುವಳಿಕೆ ನೀಡಿ ಗ್ರಾಮೀಣ ಮಟ್ಟದಿಂದಲೇ ಹೋರಾಟವನ್ನು ರೂಪಿಸಲು ನಿರ್ಧರಿಸಿದ್ದೇವೆ. ಬಿಜೆಪಿಯ ರೈತವಿರೋಧಿ ನೀತಿಯನ್ನು ಮನೆಮನೆಗೂ ಮುಟ್ಟಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group