ವಿರೋಧ ಪಕ್ಷಗಳು ಕಲಾಪ ಬಹಿಷ್ಕರಿಸಿದ ಸಂದರ್ಭದಲ್ಲೇ ನಡೆದ ಸರ್ಕಾರದ ನಡೆಗೆ ಆಕ್ಷೇಪ
ವರದಿಗಾರ (ಸೆ.22): ಎಂಟು ಸಂಸದರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ವಿರೋಧ ಪಕ್ಷ ಕಾಂಗ್ರೆಸ್ ರಾಜ್ಯಸಭೆಯ ಕಲಾಪ ಬಹಿಷ್ಕರಿಸಿದ ಸಂದರ್ಭದಲ್ಲೇ ಕೇವಲ ಮೂರು ಗಂಟೆಗಳಲ್ಲಿ 7 ಮಸೂದೆಗಳನ್ನು ಸರ್ಕಾರ ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಿದೆ. ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ, ಅಧಿವೇಶನದ ಒಂಬತ್ತನೇ ದಿನ, ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡ ಏಳು ಮಸೂದೆಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ. ಸರ್ಕಾರದ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿದೆ.
ನಾಳೆ ಬುಧವಾರ ಅಧಿವೇಶನ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಏಕಾಏಕಿ ಮಸೂದೆಗಳನ್ನು ಅಂಗೀಕರಿಸಲಾಯಿತು. ಬುಧವಾರ ಕೂಡ 5 ಮಸೂದೆಗಳಿಗೆ ಅನುಮೋದನೆ ಪಡೆದು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಸರ್ಕಾರ ನಿರ್ಧರಿಸಿದೆ.
ರಾಜ್ಯಸಭೆಯಲ್ಲಿ ಇಂದು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ 2020, ಅಗತ್ಯ ಸರಕುಗಳ(ತಿದ್ದುಪಡಿ) ಮಸೂದೆ 2020, ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನುಗಳ ತಿದ್ದುಪಡಿ (ತಿದ್ದುಪಡಿ) ಮಸೂದೆ 2020, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮಸೂದೆ 2020, ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ 2020, ಕಂಪನಿಗಳ (ತಿದ್ದುಪಡಿ) ಮಸೂದೆ 2020 ಮತ್ತು ಐಐಐಟಿ ತಿದ್ದುಪಡೆ ಮಸೂದೆ 2020ಯನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲಾಗಿದೆ.
ಪ್ರತಿಪಕ್ಷಗಳ ತೀವ್ರ ವಿರೋಧ ಮತ್ತು ಗದ್ದಲದ ನಡುವೆ ಕೃಷಿ ಸಂಬಂಧಿತ ಮೂರು ಮಸೂದೆಗಳ ಪೈಕಿ ಎರಡು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಭಾನುವಾರವೇ ಅಂಗೀಕರಿಸಲಾಗಿತ್ತು. ನಾಳೆ ಅಧಿವೇಶನ ಬಹುತೇಕ ಮುಕ್ತಾಯವಾಗಲಿದೆ.
ಅಮಾನತುಗೊಂಡ ರಾಜ್ಯಸಭಾ ಸದಸ್ಯರಿಗೆ ಒಗ್ಗಟ್ಟು ಪ್ರದರ್ಶಿಸಲು ಲೋಕಸಭೆಯಲ್ಲೂ ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಸದನವನ್ನು ಬಹಿಷ್ಕರಿಸಿದವು.
ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಮಾತನಾಡಿ, ಅಮಾನತುಗೊಂಡ ರಾಜ್ಯಸಭಾ ಸದಸ್ಯರಿಗೆ ಒಗ್ಗಟ್ಟು ಪ್ರದರ್ಶಿಸಲು ಎಲ್ಲಾ ವಿರೋಧ ಪಕ್ಷಗಳು ಸಂಸತ್ತನ್ನು ಬಹಿಷ್ಕರಿಸುತ್ತಿವೆ ಎಂದು ತಿಳಿಸಿದರು.
ಚೌಧರಿ ಘೋಷಣೆಯ ಬೆನ್ನಲ್ಲೇ ಕಾಂಗ್ರೆಸ್, ಟಿಎಂಸಿ, ಬಿಎಸ್ಪಿ ಮತ್ತು ಟಿಆರ್ ಎಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಲೋಕಸಭೆಯಿಂದ ಹೊರನಡೆದವು.
ಈ ಮಧ್ಯೆ, ಪ್ರತಿಪಕ್ಷಗಳ ಕಲಾಪ ಬಹಿಷ್ಕಾರದ ವೇಳೆಯಲ್ಲಿ ಸಂಸತ್ತಿನಲ್ಲಿ ಸರ್ಕಾರವು ಮಂಗಳವಾರ ಸಹಕಾರಿ ಬ್ಯಾಂಕುಗಳನ್ನು ಆರ್ಬಿಐ ಮೇಲ್ವಿಚಾರಣೆಯಲ್ಲಿ ತರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು.
ಮೂರೂವರೆ ಗಂಟೆಗಳ ಅವಧಿಯಲ್ಲಿ, ಪ್ರಮುಖ ವಿರೋಧ ಪಕ್ಷಗಳ ನಾಯಕರ ಅನುಪಸ್ಥಿತಿಯಲ್ಲಿ ಸರ್ಕಾರ ಏಳು ಪ್ರಮುಖ ಮಸೂದೆಗಳನ್ನು ಅಂಗೀಕರಿಸಿತು.
