ವರದಿಗಾರ (ಸೆ.22): ಈಶಾನ್ಯ ದೆಹಲಿ ಹಿಂಸಾಚಾರ ಉಲ್ಬಣಗೊಳ್ಳಲು ಫೇಸ್ ಬುಕ್ ಪ್ರಮುಖ ಪಾತ್ರವಹಿಸಿದೆ ಎಂಬ ಆರೋಪ ಎದುರಿಸುತ್ತಿರುವ ಫೇಸ್ಬುಕ್ , ಇದೀಗ ದೆಹಲಿ ವಿಧಾನಸಭೆ ಕಳುಹಿಸಿದ ನೋಟಿಸ್ ವಿರುದ್ಧವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಫೇಸ್ ಬುಕ್ ನ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಸುಪ್ರೀಂ ಕೋರ್ಟ್ಗೆ ದೆಹಲಿ ವಿಧಾನಸಭೆಯ ಸಮಿತಿಯ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಅಜಿತ್ ಅವರ ಅರ್ಜಿಯನ್ನು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಲಿದೆ.
ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿಯು, ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮೋಹನ್ ಅವರಿಗೆ ಸೆಪ್ಟೆಂಬರ್ 23ರಂದು ಸಮಿತಿಯ ಮುಂದೆ ಹಾಜರಾಗುವಂತೆ ಸೂಚಿಸಿ ಮತ್ತೊಂದು ಹೊಸ ನೋಟೀಸ್ ಕಳುಹಿಸಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ವಕ್ತಾರ ಮತ್ತು ಶಾಸಕ ರಾಘವ್ ಚಾಧಾ ನೇತೃತ್ವದ ಸಮಿತಿಯು ಸಮನ್ಸ್ ನೀಡಿದ್ದರೂ ಮೋಹನ್ ಮೂರನೇ ಬಾರಿಗೆ ವಿಚಾರಣೆಗೆ ಸಮಿತಿಯ ಮುಂದೆ ಹಾಜರಾಗದ ಕಾರಣ ಮಂಗಳವಾರ ಫೇಸ್ಬುಕ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದೆ.
ಫೇಸ್ ಬುಕ್ , ಸಮಿತಿಯ ಮುಂದೆ ಹಾಜರಾಗದೆ ದೆಹಲಿ ವಿಧಾನಸಭೆಯ ನಿಂದನೆ ಮಾಡಿದಂತಾಗಿದೆ ಎಂದು ಸಮಿತಿ ಹೇಳಿತ್ತು. ಸಂಸ್ಥೆಯ ಕಾರ್ಯನಿರ್ವಾಹಕರು ಕಳುಹಿಸಿದ್ದ ಪತ್ರವನ್ನು ವಜಾಗೊಳಿಸಿ, ಫೇಸ್ ಬುಕ್ ಕಂಪನಿಗೆ ಸಮಿತಿಯು “ಅಂತಿಮ ಎಚ್ಚರಿಕೆ” ನೀಡಿತ್ತು.
ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರು ಈಗಾಗಲೇ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿರುವುದರಿಂದ ದೆಹಲಿಯ ಸಮಿತಿಯ ಮುಂದೆ ಹಾಜರಾಗಲು ಸಾಧ್ಯವಿಲ್ಲ ಎಂದು ಫೇಸ್ಬುಕ್ನ ನಿರ್ದೇಶಕ (ವಿಶ್ವಾಸ ಮತ್ತು ಸುರಕ್ಷತೆ) ವಿಕ್ರಮ್ ಲ್ಯಾಂಗರ್ ಅವರು ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿಗೆ ಮಂಗಳವಾರ ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರವನ್ನು ಉಲ್ಬಣಗೊಳಿಸಲು ಫೇಸ್ಬುಕ್ ಇಂಡಿಯಾ ಸಹಭಾಗಿ ಎಂದು ಆರೋಪಿಸಲಾಗಿದೆ ಎಂದು ಆಗಸ್ಟ್ 31 ರಂದು ನಡೆದ ಎರಡನೇ ವಿಚಾರಣೆಯಲ್ಲಿ ಸಮಿತಿ ತಿಳಿಸಿದ ನಂತರ ಫೇಸ್ ಬುಕ್ ಗೆ ಈ ನೋಟಿಸ್ ನೀಡಲಾಗಿತ್ತು.
