ವರದಿಗಾರ (ಸೆ.22): ಎಂಟು ಸಂಸದರ ಅಮಾನತನ್ನು ಹಿಂಪಡೆಯುವವರೆಗೂ ರಾಜ್ಯಸಭೆಯ ಮುಂಗಾರು ಅಧಿವೇಶನದ ಕಲಾಪವನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಸದಸ್ಯರು ಪ್ರಕಟಿಸಿದ್ದಾರೆ.
ಎಂಟು ಸಂಸದರನ್ನು ಅಮಾನತುಗೊಳಿಸುವುದನ್ನು ಹಿಂಪಡೆದುಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಯಾವುದೇ ಖಾಸಗಿ ಸಂಸ್ಥೆಗಳು ರೈತರ ಉತ್ಪನ್ನಗಳನ್ನು ಖರೀದಿಸುವಂತಿಲ್ಲ ಎಂಬ ಅಂಶ ಇರುವ ಮತ್ತೊಂದು ಮಸೂದೆಯನ್ನು ತರುವವರೆಗೂ ಪ್ರತಿಪಕ್ಷಗಳು ಅಧಿವೇಶನವನ್ನು ಬಹಿಷ್ಕರಿಸುತ್ತವೆ” ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಹೇಳಿದರು.
ಎಲ್ಲಾ ಕಾಂಗ್ರೆಸ್ ಸದಸ್ಯರು ಅಮಾನತು ಆದೇಶವನ್ನು ವಿರೋಧಿಸಿ ಸದನದಿಂದ ಹೊರನಡೆಯುವ ಮೊದಲು ಅವರು ಈ ಹೇಳಿಕೆ ನೀಡಿದರು. ಅಮಾನತುಗೊಂಡ ಸದಸ್ಯರು ಸಂಸತ್ ನಲ್ಲೇ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕೃಷಿ ಸಂಬಂಧಿತ ಮಸೂದೆಗಳನ್ನು ಮತಕ್ಕೆ ಹಾಕಬೇಕು ಎಂದು ಒತ್ತಾಯಿಸಿ ನಿನ್ನೆ ಈ ಸದಸ್ಯರು ಧರಣಿ ನಡೆಸಿದ್ದರು. ಈ ವೇಳೆ ಸ್ಪೀಕರ್ ಪೀಠದ ಎದುರು ಜಮಾಯಿಸ ಘೋಷಣೆ ಕೂಗಿ,ಕಲಾಪಕ್ಕೆ ಅಡ್ಡಿ ಪಡಿಸಿದ್ದರು.
