ವರದಿಗಾರ (ಸೆ.21): ಸುಳ್ಳು ಆರೋಪಗಳ ಕಾರಣದಿಂದ ಜೈಲು ಪಾಲಾಗಿ, ಜಾಮೀನಿನ ಮೇಲೆ ಬಿಡುಗಡೆಯಾದ ಮೂರು ವಾರಗಳ ನಂತರ, ಅಮಾನತುಗೊಂಡ ಸರ್ಕಾರಿ ವೈದ್ಯ ಕಫೀಲ್ ಖಾನ್ ಅವರು ಸೋಮವಾರ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಭಿನ್ನಾಭಿಪ್ರಾಯಗಳನ್ನು ನಿಗ್ರಹಿಸಲು ರಾಷ್ಟ್ರೀಯ ಭದ್ರತಾ ಕಾಯ್ದೆ -ಎನ್ಎಸ್ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ –ಯುಎಪಿಎಯ ದುರುಪಯೋಗದ ವಿರುದ್ಧ ಧ್ವನಿ ಎತ್ತುವಂತೆ ಪ್ರಿಯಾಂಕಾ ಅವರಿಗೆ ಮನವಿ ಮಾಡಿದರು.
“ನಾನು ಪ್ರಿಯಾಂಕಾ ಗಾಂಧಿಯನ್ನು ನನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಹೋಗಿ ಭೇಟಿಯಾದೆ. ನನ್ನ ಮತ್ತು ನನ್ನ ಕುಟುಂಬಕ್ಕೆ ಅವರು ನೀಡಿದ ಎಲ್ಲ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಬಿಡುಗಡೆ ಮತ್ತು ನನ್ನ ಮತ್ತು ಕುಟುಂಬಕ್ಕೆ ಸುರಕ್ಷಿತ ವಾಸ್ತವ್ಯವನ್ನು ಜೈಪುರದಲ್ಲಿ ವ್ಯವಸ್ಥೆ ಮಾಡಿದ್ದು ಸೇರಿದಂತೆ ಎಲ್ಲಾ ರೀತಿಯ ಬೆಂಬಲ ನೀಡಿದ್ದಾರೆ. ಎನ್ಎಸ್ಎ ಮತ್ತು ಯುಎಪಿಎ ಕಾಯ್ದೆಗಳಡಿ ಸುಳ್ಳು ಆರೋಪಗಳಿಂದ ಬಂಧಿಸಿರುವವರಿಗೆ ನೆರವು ನೀಡುವಂತೆ ಹಾಗು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತೆ ಅವರಿಗೆ ಮನವಿ ಮಾಡಿದೆ” ಎಂದು ಡಾ.ಕಫೀಲ್ ತಿಳಿಸಿದರು.
ಹೈಕೋರ್ಟ್ ಮಧ್ಯಪ್ರವೇಶಿಸಿದ್ದರಿಂದ ಜೈಲಿನಿಂದ ಮುಕ್ತವಾಗಿ ಹೊರಬರಲು ನನಗೆ ಸಾಧ್ಯವಾಗಿರುವುದರಿಂದ ನಾನು ಅದೃಷ್ಟಶಾಲಿ ಎಂದು ಭಾವಿಸಿದ್ದೇನೆ. ಆದರೆ ಭಿನ್ನ ದನಿ ಎತ್ತಿದ್ದಕ್ಕಾಗಿ ಅಥವಾ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಈ ಕ್ರೂರ ಕಾನೂನುಗಳ ಅಡಿಯಲ್ಲಿ ಮುಗ್ಧ ಜನರು, ಯುವ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಜೈಲಿನಲ್ಲಿದ್ದಾರೆ.ಇದನ್ನು ನಿಲ್ಲಿಸಬೇಕಾಗಿದೆ ಎಂದು ನಾನು ಪ್ರಿಯಾಂಕಾ ಗಾಂಧಿಯವರಿಗೆ ಹೇಳಿದ್ದೇನೆ ಎಂದು ತಿಳಿಸಿದರು.
ಕೊರೊನಾ ವೈರಸ್ ಮಧ್ಯೆ ತಮ್ಮನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಕ್ಕಾಗಿ ಕೆಲವು ದಿನಗಳ ಹಿಂದೆ, ಡಾ. ಕಫೀಲ್ ಖಾನ್ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ (ಯುಎನ್ಹೆಚ್ಆರ್ಸಿ) ಪತ್ರ ಬರೆದು, ಧನ್ಯವಾದ ಸಲ್ಲಿಸಿದ್ದರು. ಪತ್ರದಲ್ಲಿ ಖಾನ್ ಅವರು ತಾವು ಅನುಭವಿಸಿದ ಆಘಾತಕಾರಿ ಅನುಭವ, ಗೋರಖ್ಪುರ ವಿಚಾರಣೆ, ಜೈಲುವಾಸ ಮತ್ತು ನಂತರದ ಬಿಡುಗಡೆಯ ವಿಷಯಗಳನ್ನು ಹಂಚಿಕೊಂಡಿದ್ದರು.
