ರಾಷ್ಟ್ರೀಯ ಸುದ್ದಿ

ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ ಸರ್ಕಾರ: ಸಿದ್ದರಾಮಯ್ಯ ಕಿಡಿ

siddaramaiah

ವರದಿಗಾರ (ಸೆ.21): ಸಂಸತ್ ನಲ್ಲಿ ವಿರೋಧಪಕ್ಷಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳನ್ನು ಹಿಚುಕಿ, ರೈತರ ಪಾಲಿಗೆ ಮರಣಶಾಸನವಾಗಿರುವ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆಗೆ ಬಲಾತ್ಕಾರದಿಂದ ಅಂಗೀಕಾರ ಪಡೆಯುವ ಮೂಲಕ ಬಿಜೆಪಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೊನಾ ರೋಗವನ್ನು ನಿಯಂತ್ರಿಸಲಾಗದೆ ಮಂಡಿ ಊರಿ ದೇಶದ ಜನರನ್ನು ಸಾವು-ನೋವಿನ ದವಡೆಗೆ ನೂಕುತ್ತಿರುವ ಅಸಮರ್ಥ ಸರ್ಕಾರ, ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಕೊರೊನೋತ್ತರ ಭಾರತದ ಏಕೈಕ ಆಶಾಕಿರಣವಾದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತ ಎಂದು ಕಿಡಿಕಾರಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳ ಬಗ್ಗೆ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಮಸೂದೆಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೊಳಪಡಿಸಬೇಕು ಎಂಬ ವಿರೋಧಪಕ್ಷಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಯಾಕೆ?. ದುರ್ಬಲರು, ಅಸಹಾಯಕರು ಮತ್ತು ಅಸಂಘಟಿತರಾಗಿರುವ ಶೇಕಡಾ 80ರಷ್ಟಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ಕೃಷಿ ಮಾರುಕಟ್ಟೆಯನ್ನು ಸರ್ಕಾರದ ನೆರವಿಲ್ಲದೆ ಸ್ವಯಂನಿಯಂತ್ರಿಸಲಾರರು. ಆ ಕೆಲಸ ಮಾಡುತ್ತಿದ್ದ ಎಪಿಎಂಸಿಯನ್ನು ನಾಶಮಾಡುವುದೆಂದರೆ ಪೂರ್ಣ ಕೃಷಿಕ್ಷೇತ್ರವನ್ನು ಮಣ್ಣುಪಾಲು ಮಾಡುವುದು. ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆಯ ದುರುದ್ದೇಶ. ಇದು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರ ಬೆನ್ನು ಮುರಿಯುವ ಮನೆಹಾಳು ಕೆಲಸ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.

ಕೃಷಿ ಮಾರುಕಟ್ಟೆಯ ಮೇಲಿನ ಸರ್ಕಾರದ ನಿಯಂತ್ರಣವನ್ನು ಬಿಟ್ಟುಕೊಟ್ಟು ಎಪಿಎಂಸಿಗಳನ್ನು ಖಾಸಗಿ ಧಣಿಗಳಿಗೆ ಪಾದಕ್ಕೊಪ್ಪಿಸಿ ರೈತರನ್ನು ಅವರನ್ನು ಜೀತದಾಳುಗಳಾಗಿ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಹುನ್ನಾರಗಳನ್ನು ರೈತಬಂಧುಗಳು ಅರಿತುಕೊಳ್ಳಬೇಕು. ರೈತರ ಬೆಳೆಗೆ ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗದಿರುವುದೇ ಕೃಷಿಕ್ಷೇತ್ರದ ಮೂಲ ಸಮಸ್ಯೆ. ಇದಕ್ಕಾಗಿಯೇ ಬೆಂಬಲ ಬೆಲೆಯನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ತಿದ್ದುಪಡಿ ಕಾನೂನಿನಲ್ಲಿ ಬೆಂಬಲಬೆಲೆಯ ರಕ್ಷಣೆಯನ್ನು ಕಿತ್ತೊಗೆದು ರೈತರನ್ನು ಅನಾಥರನ್ನಾಗಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸಂಸತ್ ನಿಂದ ಅನುಮೋದನೆ ಪಡೆದುಕೊಂಡಿರುವ ಹೊಸಕಾನೂನಿನಲ್ಲಿ ರೈತರ ಬೆಂಬಲ ಬೆಲೆ, ಎಪಿಎಂಸಿಯ ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಅವರ ವ್ಯವಹಾರದ ಮೇಲೆ ನಿಗಾ ಇಡುವಂತಿಲ್ಲ, ಶುಲ್ಕ, ಸೆಸ್, ಲೆವಿ ಸಂಗ್ರಹಿಸುವಂತಿಲ್ಲ. ಇದು ಸರ್ಕಾರದ ಸಂಪೂರ್ಣ ಶರಣಾಗತಿ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group