ವರದಿಗಾರ (ಸೆ.21): ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣ ಗೌಡ ಮತ್ತು ಕಡೂರು ಶಾಸಕ ಬೆಳ್ಳಿಪ್ರಕಾಶ್ ನಡುವೆ ವಿಧಾನಸಭೆ ಮೊಗಸಾಲೆಯಲ್ಲಿ ಸೋಮವಾರ ಮಧ್ಯಾಹ್ನ ಜಟಾಪಟಿ ನಡೆದಿದೆ.
ಅನುದಾನ ಬಿಡುಗಡೆಗೆ ಸಂಬಂಧಿಸಿ ಜಟಾಪಟಿ ನಡೆದಿದೆ. ಮಧ್ಯಾಹ್ನ 12:40ರ ಸುಮಾರಿಗೆ ಸಚಿವ ನಾರಾಯಣ ಗೌಡ ಉಪಾಹಾರ ಗೃಹದತ್ತ ಬರುತ್ತಿದ್ದರು. ಆಗ ಎದುರಾದ ಶಾಸಕ ಬೆಳ್ಳಿಪ್ರಕಾಶ್, ತಮ್ಮ ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ಅನುದಾನ ಬಿಡುಗಡೆ ವಿಳಂಬ ಆಗುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಕೆ.ಎಸ್. ಈಶ್ವರಪ್ಪ, ವಿ.ಸೋಮಣ್ಣ, ಜೆಡಿಎಸ್ ಶಾಸಕ ಅನ್ನದಾನಿ ಸೇರಿದಂತೆ ಹಲವರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಬಿಜೆಪಿ ಸಚಿವ, ಶಾಸಕರ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ಅವರು ಪರಸ್ಪರ ಕೂಗಾಡಿದ್ದಾರೆ. ಯಾರೇ ಆಗಲಿ ಶಾಸಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಆರು ಕೋಟಿ ಜನ ನಮ್ಮನ್ನು ನೋಡುತ್ತಿದ್ದಾರೆ. ಅವರು ಅವರು ಎಲ್ಲರನ್ನೂ ಗಮನಿಸುತ್ತಿರುತ್ತಾರೆ. ಸಾರ್ವಜನಿಕವಾಗಿ ಅವರು ಗಲಾಟೆ ಮಾಡಿಕೊಂಡರೆ ತಪ್ಪು ಸಂದೇಶ ರವಾನೆಯಾಗುತ್ತದೆ. ನಾನು ಬಂದಾಗ ಅವರು ಗಲಾಟೆ ಮಾಡುತ್ತಿದ್ದರು. ನಾನೇ ಅವರನ್ನು ಕರೆದು ಸಮಾಧಾನ ಮಾಡಿದ್ದೇನೆ ಎಂದು ಹೇಳಿದರು.
ಬಳಿಕ ಸಚಿವ ನಾರಾಯಣಗೌಡ ಪ್ರತಿಕ್ರಿಯಿಸಿ, ನಮ್ಮ ನಡುವೆ ಗಲಾಟೆ ಆಗಿಲ್ಲ. ಪ್ರಕಾಶ್ ಕೇಳಿದ್ದು ತಾಂತ್ರಿಕ ವಿಷಯವಾಗಿತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ಮಾತಾಡೋಣ ಎಂದು ಹೇಳಿದೆ, ಅವರು ತಮ್ಮನ್ನು ಏಕ ವಚನದಲ್ಲಿ ಮಾತನಾಡಿದ್ದು ಸರಿಯಲ್ಲ. ನನ್ನ ಮೇಲೆ ಯಾವ ಮುಷ್ಠಿ ಪ್ರಹಾರ ಮಾಡಿಲ್ಲ. ಇದೊಂದು ಚಿಕ್ಕವಿಷಯ ಎಂದು ಸ್ಪಷ್ಟನೆ ನೀಡಿದ್ದಾರೆ.
