ಅಭಿಪ್ರಾಯ

ತಲಾಖ್… ತಲಾಖ್… ತಲಾಖ್… ನೀವಂದುಕೊಂಡಂತಲ್ಲ !!

ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾದ ಮುಸ್ಲಿಮರ ತಲಾಖ್’ಗೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಎರಡು ಮುಖಗಳಿದ್ದು ತ್ರಿವಳಿ ತಲಾಖ್ ಅಸಿಂಧು ಎಂದು ಫತ್ವಾ ರೂಪದಲ್ಲಿ ತೀರ್ಪು ನೀಡುವ ಮೂಲಕ ಭಾರತದ ಸಂವಿಧಾನ ಪ್ರಜೆಗಳಿಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದು ಕೊಂಡಂತಾಗಿದೆ. ಇಸ್ಲಾಮಿನ ವಿವಾಹ ವಿಚ್ಚೇದನದ ರೀತಿ ರಿವಾಜು ಅತ್ಯಂತ ಮಾನವೀಯತೆಯಿಂದ ಕೂಡಿದ್ದು, ದಂಪತಿಗಳೆಡೆಯಲ್ಲಿ ವಿರಸ ಮೂಡಿದರೆ ಅದನ್ನು ಸರಿ ಪಡಿಸಲು ಕೆಲ ಪ್ರಾಥಮಿಕ ಸಲಹೆ ಸೂಚನೆಗಳನ್ನು ಪವಿತ್ರ ಕುರ್’ಆನಿನಲ್ಲಿ ಸೂಚಿಸಲಾಗಿದ್ದು ಅದು ಪರಿಣಾಮಕಾರಿಯಾಗದಿದ್ದರೆ ಒಂದು ತಲಾಖ್  ನೀಡಿ ಅದರೆಡೆಯಲ್ಲಿ ನಿಶ್ಚಿತ ಅವಧಿಯೊಳಗೆ ಅವಳನ್ನು ಮರಳಿ ಪಡೆಯುವ ಅವಕಾಶ ಇರುತ್ತದೆ. ಇನ್ನು ಮರಳಿ ಪಡೆಯದಿದ್ದು ಅವಳು ಬೇರೆ ವಿವಾಹವೂ ಕೂಡಾ ಆಗದೇ ಇದ್ದಲ್ಲಿ ನಿಕಾಹಿನ ಮೂಲಕ ಅವಳನ್ನು ಪುನಃ ವರಿಸ ಬಹುದಾಗಿದೆ. ಹಾಗೆ ಮತ್ತೆ ಮದುವೆಯಾದರೆ ಅವನಿಗೆ ಮುಂದೆ ಎರಡು ತಲಾಖ್’ನ ಅವಕಾಶ ಮಾತ್ರ ಬಾಕಿ ಉಳಿದಿರುತ್ತದೆ. ಇನ್ನು ನಿಶ್ಚಿತ ಅವಧಿಯೊಳಗೆ ಮರಳಿ ಪಡೆದು ಅಥವಾ ಮತ್ತೊಂದು ನಿಖಾ ಮೂಲಕ ಮದುವೆಯಾಗಿ, ಆ ನಂತರ ಪುನಃ ಇವರಿಗೆ ಮುಂದುವರಿಯಲು ಸಾದ್ಯವಾಗದಿದ್ದರೆ ಮೊದಲಿನಂತೆಯೇ ಎರಡನೇ ತಲಾಖ್ ಹೇಳಬಹುದು ಮತ್ತು ಆ ನಂತರ ಮೊದಲಿನಂತೆಯೇ ಮರಳಿ ಪಡೆಯಬಹುದು ಅಥವಾ ನಿಖಾ ಮಾಡಬಹುದು. ಇನ್ನು ಮತ್ತೆ ಮೂರನೇ ತಲಾಖನ್ನು ಪ್ರಯೋಗಿಸಿದರೆ, ನಂತರ ಅವಳನ್ನು ಮರಳಿ ಪಡೆಯಲು ಅಥವಾ ನಿಖಾ ಮಾಡಿ ಕೊಳ್ಳಲು ಸಾಧ್ಯವಾಗುವುದಿಲ್ಲ! ಇನ್ನು ಅವಳು ಸಹಜವಾಗಿಯೇ ಬೇರೆ ಒಬ್ಬನನ್ನು ಮದುವೆಯಾಗಿ ಅವನೊಂದಿಗೂ ಇವಳಿಗೆ ದಾಂಪತ್ಯ ಮುಂದುವರಿಸಲಾಗದೆ,  ಅವನು ತಲಾಖ್ ನೀಡಿದ್ದಲ್ಲಿ ನಿಶ್ಚಿತ ಅವಧಿಯ ನಂತರ ಮೊದಲನೆಯವನಿಗೆ ಮದುವೆ ಮಾಡಿ ಕೊಳ್ಳುವ ಅವಕಾಶ ಇರುತ್ತದೆ. ಹಾಗೆ ಮದುವೆಯಾದಲ್ಲಿ ಅದು ಇನ್ನೊಂದು ಪರಿಪೂರ್ಣ ಮದುವೆಯೆಂದು ಪರಿಗಣಿಸಿ ಅದರಲ್ಲಿ ಮೂರು ತಲಾಖಿನ ಅವಕಾಶ ಅವನಿಗೆ ಮರಳಿ ಬರುತ್ತದೆ. ಇದು ಇಸ್ಲಾಂ ಧರ್ಮದಲ್ಲಿ ಪ್ರತಿಪಾದಿಸಲಾದ ವಿವಾಹ ವಿಚ್ಛೇದನದ ರೀತಿಯಾಗಿದ್ದು, ಇದು ಅತ್ಯುತ್ತಮವೂ ಮತ್ತು ಅಷ್ಟೇ ಪ್ರಾಯೋಗಿಕವಾದ ತಲಾಖಿನ ಪ್ರಕ್ರಿಯೆಯಾಗಿದೆ.

ಈ ರೀತಿಯ ತಲಾಖ್ ಬಗ್ಗೆ ಯಾರಿಗೂ ವಿವಾದ ಕೂಡಾ ಇಲ್ಲ ಎಂಬುದು ಗಮನಿಸ ಬೇಕಾದ ಅಂಶ. ಆದರೆ ಈಗ ಸದ್ಯಕ್ಕೆ ವಿವಾದ ಇರುವುದು ಒಂದೇ ಉಸಿರಿನಲ್ಲಿ ಮೂರು ತಲಾಖ್ ಹೇಳುವ ತ್ರಿವಳಿ ತಲಾಖಿನ ಅಥವಾ ಪೋನ್ ಮುಖಾಂತರ ಮೂರು ತಲಾಖ್ ಹೇಳಿ, ಆ ನಂತರ ಅವನಿಗೆ ಪಾಶ್ಚಾತಾಪವಾಗಿ ಅವಳನ್ನು ಮರಳಿ ಪಡೆಯ ಬೇಕಾದ ಸನ್ನಿವೇಶ ಬಂದಾಗ, ಉಭಯ ಕುಟುಂಬಿಕರು ಧಾರ್ಮಿಕ ಉಲಮಾಗಳನ್ನು ಸಂಪರ್ಕಿಸಿದಾಗ, ಅವರು ಶರೀಅತ್ ನಿಯಮಗಳ ಪ್ರಕಾರ ತೀರ್ಪು ನೀಡುತ್ತಾರೆ. ಅದರ ಪ್ರಕಾರ ತಲಾಖ್ ಹೇಳಲ್ಪಟ್ಟವಳನ್ನು ಇನ್ನೋರ್ವ ಮದುವೆಯಾಗಬೇಕು ಮತ್ತು ಅವನೂ ಕೂಡಾ ತಲಾಖ್ ನೀಡಿದರೆ ಮಾತ್ರವೇ ನಿಶ್ಚಿತ ಅವಧಿಯ ನಂತರ ಅವಳನ್ನು ಮೊದಲಿನ ಗಂಡ ಮರು ಮದುವೆಯಾಗಬಹುದು.

ಇಲ್ಲಿ ಪುರುಷನ ತಪ್ಪಿಗೆ ಮಹಿಳೆಯಾದವಳು ಶಿಕ್ಷೆ ಅನುಭವಿಸಬೇಕಾಗುತ್ತದೆಯಲ್ಲವೇ? ಇದಾಗಿದೆ ಕೋರ್ಟ್ ಮತ್ತು ಸಾರ್ವಜನಿಕರ ಪ್ರಶ್ನೆ. ಬಾಹ್ಯ ನೋಟಕ್ಕೆ ಈ ಪ್ರಶ್ನೆಯಲ್ಲಿ ಹುರುಳಿದೆ ಎಂದು ಅನಿಸಿದರೂ ಇಸ್ಲಾಂ ಧರ್ಮದ ನೀತಿ ನ್ಯಾಯದ ಒಳಹೊಕ್ಕು ಪರಿಶೀಲನೆ ನಡೆಸಿದರೆ ಇದರಲ್ಲಿ ಅಂತಹ ಅಸಂಗತ್ಯವೇನೂ ಇರುವುದಿಲ್ಲ. ತಲಾಖ್ ಎಂಬ ಅಸ್ತ್ರದೊಂದಿಗೆ ಸರಸವಾಡದಿರಿ ಎಂಬ ಪರೋಕ್ಷ ಎಚ್ಚರಿಕೆಯನ್ನು ಪುರುಷನಿಗೆ ಕೊಡುವ ಒಂದು ನಡೆಯಾಗಿದೆ ಇದು. ದಂಪತಿಗಳು ಪರಸ್ಪರ ಪ್ರೀತಿ ಪ್ರೇಮ ಮೆರೆದು ಹಾಯಾಗಿರ ಬೇಕೆಂದೂ, ತಲಾಖ್ ಗೆ ಕೊಂಡೊಯ್ಯುವ ಗುಣ ಸ್ವಭಾವಗಳು ಮತ್ತು ಸನ್ನಿವೇಶಗಳು ಉಭಯತ್ರಯರಿಂದ ಉಂಟಾಗ ಬಾರದೆಂಬುದೇ ಇದರ ಸಂದೇಶವಾಗಿದೆ. ಇದೇ ಕಾರಣಕ್ಕಾಗಿ ಇತರ ಸಮಾಜಕ್ಕೆ ಹೋಲಿಸಿದರೆ ಮುಸ್ಲಿಮರಲ್ಲಿ ವಿವಾಹ ವಿಚ್ಛೇದನದ ಪ್ರಕರಣಗಳು ಕನಿಷ್ಟವಾಗಿದ್ದು ಇದು ಅಲ್ಲಾಹು ನೀಡಿದ ಅನುಗ್ರಹವಾಗಿದೆ.

ಮತ್ತೆ ಕಾಡುವ ಇನ್ನೊಂದು ಸಮಸ್ಯೆ ಏನೆಂದರೆ ಒಂದೇ ಉಸಿರಿಗೆ ಮೂರು ತಲಾಖ್ ಹೇಳಿದರೆ ಅದು ಸಿಂಧು ಆಗುವುದಿಲ್ಲ ಎಂದು ಕೋರ್ಟ್ ತೀರ್ಪು ಹೇಳಿರುವುದು ಸರಿಯೇ? ಶರೀಅತ್ ಪ್ರಕಾರ ಅದು ಸಿಂಧು ಎಂಬುವುದರಲ್ಲಿ ಮುಸ್ಲಿಮರೆಡೆಯಲ್ಲಿ ಯಾವುದೇ ಸಂಶಯವಿಲ್ಲದಿದ್ದರೂ, ಈ ನೆಲದ ಕಾನೂನು ಮತ್ತು ಸಂವಿಧಾನಾತ್ಮಕವಾಗಿ ಅಸಿಂಧುವಾಗಬಹುದು. ಇನ್ನು ಮುಸ್ಲಿಮರೊಳಗೆ ಈ ಬಗ್ಗೆ ವಿವಾದ ಇರುವುದೇನೆಂದರೆ ಒಂದೇ ವೇಳೆ ಮೂರು ತಲಾಖ್ ಹೇಳಿದರೆ ಅದು ಮೂರು ಎಂದು ಪರಿಗಣಿಸಲ್ಪಡುವುದೇ ಅಥವಾ ಒಂದು ಎಂದು ಪರಿಗಣಿಸಲ್ಪಡುವುದೇ ಎಂದು. ಇದರಲ್ಲಿ  ಇಸ್ಲಾಮೀ ಕರ್ಮಶಾಸ್ತ್ರದ ಪಂಡಿತರ ಮಧ್ಯೆ ಭಿನ್ನಾಭಿಪ್ರಾಯವಿದೆ. ಕರ್ಮಶಾಸ್ತ್ರದ ಮತ್ತು ಕುರ್’ಆನ್ ವ್ಯಾಖ್ಯಾನಗಾರರಾದ ಇತಿಹಾಸದ ಉಲಮಾಗಳಲ್ಲಿ ಬಹುತೇಕರು ಅದು ಮೂರು ಎಂದೇ ಪರಿಗಣಿಸಲ್ಪಡುತ್ತದೆ ಎಂದು ಹೇಳಿದ್ದರೆ, ಇನ್ನು ಸಣ್ಣ ಒಂದು ಪಂಡಿತರ ವಿಭಾಗ ಅದು ಒಂದು ತಲಾಕ್ ಮಾತ್ರ ಆಗಿ ಪರಿಗಣಿಸಲ್ಪಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದೇನಿದ್ದರೂ ಮುಸ್ಲಿಮರ ಒಳಗಿರುವ ಆಂತರಿಕ ಭಿನ್ನಾಭಿಪ್ರಾಯಗಳ ವಿಷಯದಲ್ಲಿ ಕೋರ್ಟ್ ಮಧ್ಯಪ್ರವೇಶ ಒಂದು ರೀತಿಯಲ್ಲಿ ಸಂವಿಧಾನವೇ ನೀಡಿರುವ ಧಾರ್ಮಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದರೂ ತಪ್ಪಾಗಲಾರದು. ಈ ಬಗ್ಗೆ ದಕ್ಷಿಣ ಭಾರತದ ಸರ್ವೋನ್ನತ ಪಂಡಿತ ಸಭೆ ಸಮಸ್ತ ಉಲಮಾ ಒಕ್ಕೂಟ ಶೀಘ್ರವೇ ಸಭೆ ಸೇರಲಿದೆ. ಒಟ್ಟಾರೆ ಹೇಳುವುದಾರೆ ತ್ರಿವಳಿ ತಲಾಖ್ ಹೇಳಿದವನನ್ನು ಶಿಕ್ಷೆಗೆ ಗುರಿಪಡಿಸುವ ಅಧಿಕಾರ ಮಾತ್ರ ನ್ಯಾಯಾಲಯಕ್ಕೆ ಇದ್ದು, ತ್ರಿವಳಿ ತಲಾಕಿನ ಸಿಂಧುತ್ವದ ಬಗ್ಗೆ ತೀರ್ಪು ಕೊಡುವಾಗ ಮುಸ್ಲಿಮರಿಗೆ ಸಂವಿಧಾನಾತ್ಮಕವಾಗಿ ಇರುವಂತಹ ಧಾರ್ಮಿಕ ಹಕ್ಕಿನ ವ್ಯಾಖ್ಯೆ ಮತ್ತು ಶರೀಅತ್ ಕಾನೂನನ್ನು ಗೌರವಾನ್ವಿತ ಕೋರ್ಟ್ ಪರಿಗಣಿಸಬೇಕಾಗಿದೆ.

ನಿರ್ದಿಷ್ಟ ಅವದಿಯಲ್ಲಿ ಮನ ಪರಿವರ್ತನೆ ಗೊಂಡು ಒಂದು ವೇಳೆ ದಾಂಪತ್ಯವನ್ನು ಮುಂದುವರಿಸುವ ಸಂದರ್ಭ ಒದಗಿ ಬರಲಿ ಎಂಬ ಸದುದ್ದೇಶದಿಂದ ಈ ಕಟ್ಟುಪಾಡುಗಳನ್ನು ಪವಿತ್ರ ಕುರ್’ಆನ್ ಸೂಚಿಸಿದ್ದು ಇದ್ಯಾವುದೂ ಫಲಕಾರಿಯಾಗದೇ ಬಿಡುಗಡೆ ಗೊಳಿಸುವುದೊಂದೇ ದಾರಿಯೆಂದಾದಲ್ಲಿ ಅಲ್ಲಿ ಕೂಡಾ ಮಹಿಳೆಯರೊಂದಿಗೆ ಇಸ್ಲಾಂ ಧರ್ಮ ಅತ್ಯಂತ ಕಾಳಜಿ ತೋರಿದ್ದು , ಮಹಿಳೆಯರಿಗೆ ಆದಷ್ಟು ಬೇಗ ಇನ್ನೊಂದು ಮದುವೆಯಾಗಲು ಅನುಕೂಲ ಮಾಡಿ ಕೊಡುವ ಸಲುವಾಗಿ ಅವಳಿಗೆ ಋತುಸ್ರಾವ ಇರುವ ವೇಳೆ ತಲಾಖ್ ಕೊಡುವುಕ್ಕೆ ಇಸ್ಲಾಂ ನಿಷೇಧ ಹೇರಿದೆ. ಅದೇ ರೀತಿ ಗರ್ಭಿಣಿಯರಿಗೆ ತಲಾಖ್ ಕೊಡುವುದನ್ನು ಕೂಡಾ ಗಂಭೀರವಾಗಿ ಪರಿಗಣಿಸಿದೆ. ಹೆಚ್ಚಿನ ಪಂಡಿತರು ಅದನ್ನು ನಿಷಿದ್ದವೆಂದು ಕೂಡಾ ಘೋಷಿಸಿದ್ದಾರೆ. ಅದು ಮಾತ್ರವಲ್ಲದೆ ಈ ಎಲ್ಲಾ ಕಟ್ಟುಪಾಡುಗಳನ್ನು ಪರಿಪೂರ್ಣವಾಗಿ ಪಾಲಿಸಿ ಆ ನಂತರ ತಲಾಖ್ ಕೊಡುವುದಿದ್ದರೂ,  ಆ ವೇಳೆ ಅಲ್ಲಾಹನ ಸಿಂಹಾಸನ ಕಂಪಿಸುತ್ತದೆ ಎಂದೂ, ಅಲ್ಲಾಹನು ಈ ಜಗತ್ತಿನಲ್ಲಿ ಜನರಿಗೆ ಅನುಮತಿ ನೀಡಿ ಹಲಾಲ್’ಗೊಳಿಸಿದವುಗಳ ಪೈಕಿ ಅಲ್ಲಾಹನಿಗೆ ಕೋಪ ತರಿಸುವ ಒಂದಿದ್ದರೆ ಅದು ಈ ತಲಾಖ್ ಆಗಿದೆ ಎಂದು ಪ್ರತ್ಯೇಕವಾಗಿ ಪ್ರವಾದಿ ಸ ಅ ರವರು ಜನತೆಗೆ ಎಚ್ಚರಿಕೆ ನೀಡಿದ್ದಾರೆ.

ಮಹಿಳೆಗೆ ಮುಟ್ಟು ಇರುವ ಸಂದರ್ಭದಲ್ಲಿ ತಲಾಖ್ ಹೇಳಿದ ಅನುಚರರಲ್ಲಿ ಪ್ರವಾದಿ (ಸ ಅ) ರು ಕೋಪ ಗೊಂಡ ಘಟನೆ ಹದೀಸು ಗಳಲ್ಲಿ ಉಲ್ಲೇಖ ಗೊಂಡಿದೆ. ವಿವಾಹ ವಿಚ್ಛೇದನವನ್ನು ತಡೆಗಟ್ಟಲು ಕಾನೂನು ರೂಪಿಸುವುದಕ್ಕಿಂತಲೂ ಇಲ್ಲಿ ಅಗತ್ಯ ಬೇಕಾಗಿರುವುದು ಪತಿ ಪತ್ನಿಯರೆಡೆಯಲ್ಲಿ ಪ್ರೀತಿ, ಸಹಬಾಳ್ವೆ, ನೆಮ್ಮದಿ ಮೂಡಿಸುವ ಮಾರ್ಗದರ್ಶನಗಳು ಮತ್ತು ಪರಸ್ಪರ ಇರುವ ಹಕ್ಕು ಭಾದ್ಯತೆಗಳ ಬಗ್ಗೆ ಅರಿವಾಗಿದೆ. ಇದನ್ನು ಪವಿತ್ರ ಇಸ್ಲಾಂ ತುಂಬಾ ಜವಬ್ದಾರಿಯುತವಾಗಿ ನಿರ್ವಹಿಸಿದೆ. ಈ ಬಗ್ಗೆ ನಿರಂತರ ಬೋಧನೆಗಳನ್ನು ನೀಡಿದ ಪರಿಣಾಮ ಧಾರ್ಮಿಕ ಪ್ರಜ್ಞೆ ಇರುವ ದಂಪತಿಗಳೆಡೆಯಲ್ಲಿ ವಿರಸ ಮೂಡುವುದು ತೀರಾ ಕಡಿಮೆ ಎಂದು ಧೈರ್ಯ ಸಮೇತ ಹೇಳ ಬಹುದು.

-ಎಸ್ ಬಿ ಮುಹಮ್ಮದ್ ದಾರಿಮಿ

 

ವಿ. ಸೂ: ಈ ಬರಹದಲ್ಲಿ ಅಭಿವ್ಯಕ್ತಗೊಂಡ ಅಭಿಪ್ರಾಯಗಳು ಲೇಖಕರ ವೈಯುಕ್ತಿಕ ಅಭಿಪ್ರಾಯವಾಗಿರುತ್ತದೆ. ಲೇಖಕನ ಅಭಿಪ್ರಾಯವೂ “ವರದಿಗಾರ”ನ ನಿಲುವೂ ಒಂದೇ ಆಗಿರಬೇಕೆಂದಿಲ್ಲ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group