ವರದಿಗಾರ (ಸೆ.20): ಜೆಡಿಎಸ್ ಪಕ್ಷದಲ್ಲಿದ್ದಾಗ ಅಧಿಕಾರ, ಸ್ಥಾನ-ಮಾನಗಳನ್ನು ಅನುಭವಿಸಿ ತಮ್ಮ ಬೆಂಬಲಿಗರೊಂದಿಗೆ ಗಂಟು ಮೂಟೆ ಕಟ್ಟಿಕೊಂಡು ಅಧಿಕಾರದ ಆಸೆಗಾಗಿ, ಅವಕಾಶವಾದಿ ಹಾದಿ ಹಿಡಿದ ಕೃತಘ್ನಗೇಡಿತನದ ಸಿದ್ದರಾಮಯ್ಯ ಅವರಿಂದ ನಮ್ಮ ಪಕ್ಷ ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ. ನಿಮ್ಮ ಸ್ವಾಭಿಮಾನದ ಪ್ರಲಾಪ ಮಠದೊಳಗಿನ ಬೆಕ್ಕಿನ ಮುಖವಾಡದಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೆಡಿಎಸ್ ಅವಕಾಶವಾದಿ ಪಕ್ಷ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಇಂದು ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದಾಗಲೇ ಬಹಿರಂಗವಾಗಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಬೇಕು. ಇದನ್ನು ಬುಡಸಹಿತ ಕಿತ್ತೊಗೆಯಬೇಕು ಎಂದು ಬಹಿರಂಗವಾಗಿ ಅಂತರಂಗದ ಮಾತನ್ನು ಉದ್ಗರಿಸಿದ್ದ ನೀವು ಎಂತಹ ಸ್ವಾರ್ಥಿ ಮತ್ತು ಎಡಬಿಡಂಗಿತನದ ರಾಜಕಾರಣಿ ಎಂಬುದು ಇಡೀ ನಾಡಿಗೆ ಗೊತ್ತಿದೆ ಎಂದು ಟೀಕಿಸಿದ್ದಾರೆ.
ಅಧಿಕಾರದ ನಿರ್ಮೋಹ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ದೇವೇಗೌಡರು ಪ್ರಧಾನಿ ಹುದ್ದೆಯನ್ನೇ ತ್ಯಜಿಸಿ ಬಂದರು. ಅಧಿಕಾರ ಉಳಿಸಿಕೊಳ್ಳಬೇಕೆಂದಿದ್ದರೆ ಪ್ರಧಾನಿಯಾಗಿ ಮುಂದುವರಿಯಬಹುದಿತ್ತು. ದೇವೇಗೌಡರ ಈ ಸ್ವಾಭಿಮಾನಿ ರಾಜಕಾರಣವನ್ನು ಇಷ್ಟು ಬೇಗ ಮರೆತು ಬಿಟ್ಟಿರಾ? ಆತ್ಮವಂಚನೆಯ ರಾಜಕಾರಣಿಯಿಂದ ಜೆಡಿಎಸ್ ಕಲಿಯುವುದು ಏನೇನೂ ಇಲ್ಲ. ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನರ ಕಷ್ಟಕಾರ್ಪಣ್ಯಗಳು, ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದೆ. ಅಧಿಕಾರದ ಮದ ಮತ್ತು ದುರಹಂಕಾರವನ್ನು ಎಂದೂ ಪ್ರದರ್ಶನ ಮಾಡಿಲ್ಲ. ಅಧಿಕಾರದ ಅಲ್ಪಾವಧಿಯಲ್ಲೂ ಜನಕಲ್ಯಾಣ ಪಕ್ಷದ ಹೆಗ್ಗುರುತಾಗಿತ್ತು. ಪಕ್ಷಾಂತರ ಮಾಡಿ ಅಧಿಕಾರ ಹಿಡಿದ ನೀವು ಆ ಪಕ್ಷದಲ್ಲಿ ಬಿತ್ತಿದ ಬೆಳೆ ಮತ್ತು ಕಳೆ ಏನೆಂಬುದನ್ನು ನಿಮ್ಮನ್ನು ಆಲಿಂಗಿಸಿಕೊಂಡ ಪಕ್ಷದವರು ಈಗ ಅನುಭವಿಸುತ್ತಿದ್ದಾರೆ. ನಿಮ್ಮ ಸ್ವಾರ್ಥ ರಾಜಕಾರಣದ ಕುಟಿಲ ತಂತ್ರಗಳನ್ನು ಮರೆಮಾಚಿಕೊಳ್ಳಲು ಬೆಳೆದ ಪಕ್ಷಕ್ಕೆ ಮಗ್ಗುಲಲ್ಲಿ ಇದ್ದು ಬಾಕು ಹಾಕಿದವರ ಮಾರ್ಜಾಲ ಉಪದೇಶ ಯಾರಿಗೆ ಸಹ್ಯವಾದೀತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ತನುವಿನೊಳು ಕಪಟ ಮನದೊಳು ಮರ್ಕಟ ಆಚಾರ ಲಿಂಗವ ಭಂಗಗೊಳಿಸಿ ಸಂಗ ಕೇಳಿಯ ಮನದ ಮುಂದಣ ಆಸೆಯ ಮತಿಗೇಡಿ ನೀನು ಶರಣನೆಂದು ಕೊಂಡೊಡೆ ಲಿಂಗ – ಜಂಗಮ ಕೂಡಲ ಸಂಗನು ಮುನಿದು ತಲೆ ಹೋಳಾದೀತು ಎಂಬ ವಚನವನ್ನು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
