ವರದಿಗಾರ (ಸೆ.20): ಭಾರತದ ಗಡಿ ವ್ಯೂಹಾತ್ಮಕತೆ ಹಾಗೂ ಸೇನಾ ನಿಯೋಜನೆ ಕುರಿತ ಸೂಕ್ಷ್ಮ ಮಾಹಿತಿಗಳನ್ನು ಚೀನಾ ಗುಪ್ತಚರರಿಗೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಹವ್ಯಾಸಿ ಪತ್ರಕರ್ತ ರಾಜೀವ್ ಶರ್ಮಾ ಆರ್ ಎಸ್ ಎಸ್ ಬೆಂಬಲಿತ ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಷನ್ (ವಿ ಐ ಎಫ್) ಜೊತೆ ನಿಕಟ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ.
ವಿಐ ಎಫ್ ನಲ್ಲಿ ಈಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೊಂದಿಗೆ ಶರ್ಮಾ ಕೆಲಸ ಮಾಡಿದ್ದರು ಎಂಬ ವಿಷಯ ಬಹಿರಂಗವಾಗಿದೆ.
ಎಐಸಿಸಿ ಮಾಧ್ಯಮ ಸಮನ್ವಯಕಾರ ಪ್ರಶಾಂತ್ ಪ್ರತಾಪ್ ಸಿಂಗ್ ಅವರು ಈ ಸಂಬಂಧ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ, ಸಂದರ್ಶನಕಾರರೊಬ್ಬರು, ರಾಜೀವ್ ಶರ್ಮಾ ಅವರು ಈ ಹಿಂದೆ ಕೆಲಸ ಮಾಡಿದ್ದ ಸಂಸ್ಥೆಗಳನ್ನು ವಿವರಿಸುವಾಗ ವಿವೇಕಾನಂದ ಫೌಂಡೇಷನ್ ನಲ್ಲಿ ಕೆಲಸ ಮಾಡಿರುವುದನ್ನು ಪ್ರಸ್ತಾಪಿಸುತ್ತಾರೆ. ಅದಕ್ಕೆ ಶರ್ಮಾ ಹೌದು ಎಂದು ಒಪ್ಪಿಕೊಳ್ಳುತ್ತಾರೆ.
ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಷನ್ ಮತ್ತು ಇಂಡಿಯಾ ಫೌಂಡೇಷನ್ ಸಂಸ್ಥೆಗಳು, ಆರ್ ಎಸ್ ಎಸ್ ನ ಅಂಗಸಂಸ್ಥೆಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ದೇಶದ ಗುಪ್ತ ಮಾಹಿತಿಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡಿ ಸಿಕ್ಕಿ ಬೀಳುವವರೆಲ್ಲಾ ಬಿಜೆಪಿ ಅಥವಾ ಆರ್ ಎಸ್ ಎಸ್ ನೊಂದಿಗೆ ಸಂಬಂಧ ಹೊಂದಿದವರೇ ಆಗಿರುವುದು ಯಾಕೆ ? . ಇಲ್ಲಿ ನೀವು ಏನನ್ನು ಅಡಗಿಸಿಡಲು ಪ್ರಯತ್ನಿಸುತ್ತಿದ್ದೀರಿ ?ಎಂದು ಪ್ರತಾಪ್ ಸಿಂಗ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸುತ್ತಾರೆ.
ಮಾತ್ರವಲ್ಲ ಪತ್ರಕರ್ತ ರಾಜೀವ್ ಶರ್ಮಾ ಅವರು ಅಜಿತ್ ಧೋವಲ್ ಅವರನ್ನು ಹೊಗಳಿ ಅನೇಕ ವೆಬ್ ಸೈಟ್ ಗಳಿಗೆ ಲೇಖನ ಬರೆದಿರುವುದು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ ಎಂದೂ ಅವರು ಹೇಳಿದ್ದಾರೆ.
