ಮುಸ್ಲಿಮರ ಪವಿತ್ರ ಹಬ್ಬಗಳ ಪೈಕಿ ಅತೀ ಮಹತ್ವವುಳ್ಳ ಹಬ್ಬಗಳು ಎರಡೇ ಒಂದು ಈದ್ ಉಲ್ ಫಿತ್ರ್ (ರಂಜಾನ್ ಹಬ್ಬ) ಹಾಗೂ ಈದ್ ಉಲ್ ಅದಾ (ಬಕ್ರೀದ್ ಹಬ್ಬ) ಇಸ್ಲಾಮಿಕ್ ಕ್ಯಾಲೆಂಡರ್’ನ ಒಂಬತ್ತನೆಯ ತಿಂಗಳಲ್ಲಿ ಒಂದು ತಿಂಗಳ ಸಂಪೂರ್ಣ ಉಪವಾಸ (ವೃತ) ಕೈಗೊಂಡು ಬಳಿಕ ರಂಜಾನ್ ಹಬ್ಬ ಆಚರಿಸಿದರೆ ಇಸ್ಲಾಮಿಕ್ ಕ್ಯಾಲೆಂಡರ್’ನ ಕೊನೆಯ ತಿಂಗಳಾದ ದುಲ್ ಹಜ್ಜ್’ನ ಹತ್ತನೆಯ ದಿನದಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ.
ಪವಿತ್ರ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಕೊನೆಯ ಕಾರ್ಯವಾಗಿದೆ ಪವಿತ್ರ ಹಜ್ಜ್ ಕರ್ಮ. ಆರೋಗ್ಯವಂತನಾದ, ಧನಿಕ ಮತ್ತು ಪ್ರಯಾಣ ಕೈಗೊಳ್ಳಲು ಸೌಕರ್ಯವಿರುವ ಪ್ರತಿಯೊಬ್ಬ ಮುಸಲ್ಮಾನನಿಗೂ ಜೀವನದಲ್ಲಿ ಒಮ್ಮೆಯಾದರೂ ಹಜ್ಜ್ ಕರ್ಮ ನಿರ್ವಹಿಸುವುದು ಕಡ್ಡಾಯವಾಗಿದೆ. ಅದರಂತೆ ಈದುಲ್ ಫಿತ್ರ್ ಆಚರಿಸಿ ಮತ್ತೆ ಮುಸ್ಲಿಂ ಸಮುದಾಯವು ಕಾಯುವುದಿದ್ದರೆ ಅದು ಪವಿತ್ರ ಹಜ್ಜ್ ಕರ್ಮವಾಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಹಜ್ಜ್ ಯಾತ್ರೆಯ ಸಂಕಲ್ಪ ತೊಟ್ಟು ಆ ಯಾತ್ರೆಗಾಗಿ ಸಕಲ ಸಿದ್ದತೆಯನ್ನು ನಡೆಸುತ್ತಾರೆ. ಯಾಕೆಂದರೆ ನಾವು ದಿನದ ಐದು ಬಾರಿ ನಮಾಜ್ ಮಾಡುವ ಸಂದರ್ಭ ಅಭಿಮುಖವಾಗಿ ನಿಲ್ಲುವ ಕಅಬಾಲಯವನ್ನು ಒಮ್ಮೆ ನೋಡುವ ತವಕ ಎಲ್ಲರದ್ದಾಗಿರುತ್ತದೆ ಹಾಗೂ ಅತೀ ಹೆಚ್ಚು ಪುಣ್ಯ ದೊರಕುವ ಕಾರ್ಯಗಳಲ್ಲಿ ಒಂದಾಗಿದೆ ಹಜ್ಜ್ ಕರ್ಮ. ಆದ್ದರಿಂದ ಈ ವರ್ಷವೂ ಕೂಡ ವಿವಿದ ರಾಷ್ಟ್ರಗಳಿಂದ ವಿಶ್ವಾಸಿಗಳ ದಂಡು ಇಬ್ರಾಹಿಂ ನೆಬಿ (ಅ ಸ.) ಪುತ್ರ ಇಸ್ಮಾಯಿಲ್ ನೆಬಿ (ಅ ಸ) ಹಾಗೂ ಹಾಜರಾ ಬಿವಿ (ರ) ರವರ ಸ್ಮರಣೆಯೊಂದಿಗೆ ಲೋಕ ಪ್ರವಾದಿ ಮಹಮ್ಮದ್ ಮುಸ್ತಪಾ (ಸ.ಅ) ರ ಪಾದ ಸ್ಪರ್ಶದಿಂದ ಪಾವನಗೊಂಡ ಪವಿತ್ರ ಮಕ್ಕಾ ನಗರಕ್ಕೆ ತೆರಳುತ್ತಾರೆ ಅನ್ನುವುದು ವಾಸ್ತವಾಂಶ. ಈ ಮಕ್ಕಾ ನಗರವು ವಿಶ್ವಕ್ಕೆ ಶಾಂತಿ,ಸೌಹಾರ್ದತೆ ಮತ್ತು ಐಕ್ಯತೆಯ ಸಂದೇಶವನ್ನು ನೀಡುವ ಸ್ಥಳವಾಗಿದೆ. ಅದಲ್ಲದೆ ವಿವಿಧ ರಾಷ್ಟ್ರಗಳ ಜನರನ್ನು ಪರಸ್ಪರ ಕೈ ಜೊಡಿಸಿ ಒಗ್ಗೂಡಿಸುವ ಈ ಪುಣ್ಯ ಸ್ಥಳವು ಸೌಹರ್ದತೆಯ ಪ್ರತೀಕವಾಗಿದೆ. ಎರಡು ತುಂಡು ಬಟ್ಟೆ (ಇಹ್ರಾಮ್) ತೊಟ್ಟು ಹಜ್ಜ್ ಗೆ ಪ್ರವೇಶಿಸುವ ವಿಶ್ವಾಸಿಗಳು ಆತ್ಮ ಪರಿಶುದ್ದಿ ,ಶಾಂತಿ, ಸಮಾದಾನ,ಸಹೋದರತೆಯ ಪ್ರತೀಕವಾಗಿರುವರು. ಆದ್ದರಿಂದಲೇ ಹಜ್ಜ್ ಕರ್ಮವೆನ್ನುವುದು ಶಾಂತಿ ಸೌಹಾರ್ದತೆಯ ಸಂದೇಶವೆಂದು ಸಾರುತ್ತದೆ ಹಾಗೂ ಜೀವನದುದ್ದಕ್ಕೂ ಸತ್ಕರ್ಮಗಳನ್ನು ಮಾಡಲು ಪ್ರೇರೇಪಿಸುತ್ತದೆ.
ಈ ಹಜ್ಜ್ ಕರ್ಮ ನಿರ್ವಹಿಸಿ ದುಲ್ ಹಜ್ಜ್ ತಿಂಗಳ ಹತ್ತನೆಯ ದಿನ (ಚಂದ್ರದರ್ಶನದ ಆಧಾರದಲ್ಲಿ) ವಿಶ್ವದಾದ್ಯಂತ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಬಕ್ರಿದ್ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕೆ ಕಾರಣವಾದ ಸತ್ಯ ಘಟನೆಗೆ ಸರಿ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ. ಆ ಸಮಯದಲ್ಲಿ ಪವಿತ್ರ ಮಕ್ಕಾ ನಗರದಲ್ಲಿ ವಾಸವಾಗಿದ್ದ ಪ್ರವಾದಿ ಇಬ್ರಾಹಿಂ (ಅ.ಸ) ರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸುವ ಸಲುವಾಗಿ ಅಲ್ಲಾಹನಿಂದ ಅವರ ಏಕೈಕ ಪುತ್ರ ಇಸ್ಮಾಯಿಲ್ (ಅ.ಸ) ರನ್ನು ಬಲಿ ನೀಡಬೇಕೆಂದು ಆಜ್ಞೆಯಾಯಿತು. ಅದರಂತೆ ಅಲ್ಲಾಹನಿಗಾಗಿ ತನ್ನ ಏಕೈಕ ಪುತ್ರ ಇಸ್ಮಾಯೀಲ್’ರನ್ನು ಬಲಿ ನೀಡಲು ಮುಂದಾಗುತ್ತಾರೆ. ಇದನ್ನು ಒಪ್ಪಿಕೊಳ್ಳುವ ಇಸ್ಮಾಯೀಲರು ತನ್ನ ಪ್ರಾಣವನ್ನು ಅರ್ಪಿಸಲು ಸಿದ್ದರಾಗುತ್ತಾರೆ. ಆ ಸಂದರ್ಭ ದೇವದೂತರಾದ ಜಿಬ್ರೀಲ್ ಪ್ರತ್ಯಕ್ಷಗೊಂಡು ಇಬ್ರಾಹಿಂ (ಅ.ಸ) ರಿಗೆ ಇರುವ ಭಕ್ತಿಯನ್ನು ಅರಿತು ತನ್ನ ಮಗನ ಬದಲಿಗೆ ಒಂದು ಕುರಿಯನ್ನು ಬಲಿ ನೀಡುವಂತೆ ಆಜ್ಞಾಪಿಸುತ್ತಾರೆ. ಇವರ ಈ ಭಕ್ತಿ ಮತ್ತು ಸತ್ಯ ನಿಷ್ಠೆಯ ಸಂಕೇತವಾಗಿ ವಿಶ್ವದಾದ್ಯಂತ ಮುಸ್ಲಿಮರು ಬಕ್ರಿದ್ ಹಬ್ಬವನ್ನು ಆಚರಿಸುತ್ತಾರೆ. ಇದರಲ್ಲಿ ತ್ಯಾಗ ಬಲಿದಾನದ ಜೊತೆಗೆ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಪ್ರವಾದಿಗಳು ಆಜ್ಞಾಪಿಸಿದ್ದಾರೆ. ಮುಸ್ಲಿಮ್ ಸಹೋದರರು ಪರಸ್ಪರ ಶುಭಾಶಯ ವಿನಿಮಯ ಮಾಡುವುದರ ಮುಖಾಂತರ ಈ ಹಬ್ಬವನ್ನು ಆಚರಿಸುವುದು ಮತ್ತು ಹೊಸ ಬಟ್ಟೆ ಧರಿಸುವುದು ಹಬ್ಬದ ವಿಶೇಷತೆಯಾಗಿದೆ. ಕೊನೆಯದಾಗಿ, ಈ ಹಬ್ಬವು ಎಲ್ಲರಿಗೂ ಹೊಸತನವನ್ನು ನೀಡಲಿ,ವಿಶ್ವದೆಲ್ಲೆಡೆ ಶಾಂತಿ, ಸಮಾಧಾನ, ಸೌಹಾರ್ದತೆ ಮತ್ತು ಐಕ್ಯತೆಯ ಸಂದೇಶ ತಲುಪಿಸುವಂತಾಗಲಿ ಅನ್ನುವುದೇ ಹಾರೈಕೆ.
ಆಶಿಕ್ ಹಳೆಯಂಗಡಿ
