ವರದಿಗಾರ (ಸೆ.19): ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೆಣಸಲು ಮಾಜಿ ಕೇಂದ್ರ ಸಚಿವ ದೇವೇಂದ್ರ ಪ್ರಸಾದ್ ಯಾದವ್ ಅವರ ಪಕ್ಷದೊಂದಿಗೆ ಅಖಿಲ ಭಾರತ ಮಜ್ಲಿಸ್-ಎ-ಇತ್ತೀಹಾದುಲ್-ಮುಸ್ಲಿಮೀನ್ (ಎಐಎಂಐಎಂ)ನ ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ ಶನಿವಾರ ಮೈತ್ರಿ ಮಾಡಿಕೊಂಡಿದ್ದಾರೆ. ಈ ವೇಳೆ ಅವರು ಆರ್ ಜೆ ಡಿ ವಿರುದ್ಧ ವಾಗ್ದಾಳಿ ನಡೆಸಿ, ಜಾತ್ಯತೀತ ಮತಗಳನ್ನು ಆರ್ ಜೆಡಿ ವಿಭಜಿಸುತ್ತಿದೆ ಎಂದು ಟೀಕಿಸಿದರು.
ಯಾದವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉವೈಸಿ, ಯುನೈಟೆಡ್ ಡೆಮಾಕ್ರಟಿಕ್ ಸೆಕ್ಯುಲರ್ ಅಲೈಯನ್ಸ್- ಯುಡಿಎಸ್ಎ ಎಂಬ ವೇದಿಕೆ ರಚಿಸಿದ್ದು, ಈ ವೇದಿಕೆಯಡಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.
ಯಾದವ್ ಅವರು ಸಮಾಜವಾದಿ ಜನತಾದಳ (ಡಿ) ನೇತೃತ್ವ ವಹಿಸುತ್ತಿದ್ದಾರೆ.
ಅಕ್ಟೋಬರ್-ನವೆಂಬರ್ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಸಹಾಯ ಮಾಡಲು ಉವೈಸಿ ಪ್ರಯತ್ನಿಸುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಒವೈಸಿ, “ಅವರು ಹಳೆಯ ಕ್ಯಾಸೆಟ್ ಪ್ಲೇ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.
