ವರದಿಗಾರ (ಸೆ.19): ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಾಗ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬ್ಯಾಗ್ ನಲ್ಲಿ ಪಿಸ್ತೂಲ್ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಸಿಐಎಸ್ಎಫ್ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಶನಿವಾರ ಆನಂದ್ ಅಸ್ನೋಟಿಕರ್ ಅವರ ಲಗೇಜ್ ಪರಿಶೀಲನೆ ವೇಳೆ ಚೀಲದಲ್ಲಿ ಗನ್ ಪತ್ತೆಯಾಗಿದ್ದರಿಂದ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.
ಆನಂದ್ ಅಸ್ನೋಟಿಕರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದರು. ಹೀಗಾಗಿ ಇಂಡಿಗೋ ವಿಮಾನದಿಂದ ಅವರು ಬೆಳಿಗ್ಗೆ 11 ಗಂಟೆಗೆ ಗೋವಾಕ್ಕೆ ತೆರಳಬೇಕಾಗಿದ್ದರಿಂದ ನಿಯಮಾನುಸಾರ ತಪಾಸಣೆ ಮಾಡುವಾಗ ಅವರ ಬ್ಯಾಗ್ ನಲ್ಲಿ ಪಿಸ್ತೂಲು ಪತ್ತೆಯಾಗಿದೆ. ತಕ್ಷಣವೇ ವಿಮಾನ ನಿಲ್ದಾಣ ಠಾಣೆಗೆ ಅಸ್ನೋಟಿಕರ್ ಅವರನ್ನು ಕರೆತಂದ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡರು.
ಗನ್ ಸಾಗಿಸುತ್ತಿರುವ ಬಗ್ಗೆ ಅವರು ಭದ್ರತಾ ಸಿಬ್ಬಂದಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ತುರ್ತು ಕಾರ್ಯಕ್ಕಾಗಿ ಪ್ರಯಾಣ ಬೆಳೆಸಿದ್ದು, ಸ್ವಲ್ಪ ಅವಸರವಿದ್ದರಿಂದ ಬ್ಯಾಗ್ ನಲ್ಲಿ ಪಿಸ್ತೂಲ್ ಇರುವುದು ಗಮನಕ್ಕೆ ಬಂದಿರಲಿಲ್ಲ. ತಮ್ಮ ಪಿಸ್ತೂಲ್ ಗೆ ಪರವಾನಗಿ ಇದೆ ಎಂದು ಆನಂದ್ ಅಸ್ನೋಟಿಕರ್ ಅವರು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಅಸ್ನೋಟಿಕರ್ ಅವರನ್ನು ಬಿಟ್ಟು ಕಳುಹಿಸಿದ್ದು, ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುವಂತೆ ಸೂಚಿಸಿದ್ದಾರೆ.
