ರಾಷ್ಟ್ರೀಯ ಸುದ್ದಿ

ಉಗ್ರರೆಂದು ಮೂವರು ಕೂಲಿ ಕಾರ್ಮಿಕರನ್ನು ಕೊಂದ ಭದ್ರತಾ ಪಡೆ; ಸೈನಿಕರ ವಿರುದ್ಧ ಶಿಸ್ತು ಕ್ರಮ ಜರಗಿಸಲು ಆದೇಶ

Representational Image

ವರದಿಗಾರ (ಸೆ.18): ಜಮ್ಮು ಕಾಶ್ಮೀರದ ರಜೌರಿಯಲ್ಲಿ ಜುಲೈ 18ರಂದು ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಯಾದ ‘ಉಗ್ರರು’ ಎನ್ನಲಾದ ಮೂವರು, ರಜೌರಿಯ ಕೂಲಿ ಕಾರ್ಮಿಕರು ಎಂಬುದು ಬಹಿರಂಗವಾಗಿದ್ದು, ಇದನ್ನು ಸೇನೆ ಕೂಡ ಒಪ್ಪಿಕೊಂಡಿದೆ. ಜುಲೈ 18 ರಂದು ಶೋಪಿಯಾನ್‌ನಲ್ಲಿ ಆಪರೇಷನ್ ಅಮ್ ಶಿಪೋರಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸೈನಿಕರ ವಿರುದ್ಧ ಸೇನಾ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸಲು ಆದೇಶಿಸಲಾಗಿದೆ ಎಂದು ಸೇನೆ ಶುಕ್ರವಾರ ತಿಳಿಸಿದೆ.

ಮೂವರು ಕಾರ್ಮಿಕರು ಕೆಲಸ ಹುಡುಕಿಕೊಂಡು ರಜೌರಿಯಿಂದ ಶೋಪಿಯಾನ್‌ಗೆ ತೆರಳಿ ಅಮ್ ಶಿಪೋರಾದಲ್ಲಿ ಒಂದು ಬಾಡಿಗೆ ಕೊಠಡಿಯಲ್ಲಿ ತಂಗಿದ್ದರು. ಆದರೆ ಭದ್ರತಾ ಪಡೆ ಅವರನ್ನು ಉಗ್ರರು ಎಂದು ಭಾವಿಸಿ ಗುಂಡಿಕ್ಕಿ ಹತ್ಯೆ ಮಾಡಿತ್ತು.

ಈ ಮೂವರು ಕಾರ್ಮಿಕರು ಜುಲೈ 16ರಂದು ತಮ್ಮ ಮನೆಗಳಿಗೆ ಕೊನೆಯ ಬಾರಿಗೆ ಕರೆ ಮಾಡಿ, ಮಾತನಾಡಿದ್ದರು.
ಅದಾದ ಬಳಿಕ ಅವರು ಮನೆಗೆ ಕರೆ ಮಾಡಿಲ್ಲ. ಅಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಅಥವಾ ಅವರು ಕ್ವಾರಂಟೈನ್ ನಲ್ಲಿ ಇರಬಹುದು ಎಂದು ಮನೆಯವರು ಕೂಡ ಸುಮ್ಮನಿದ್ದರು. ಆದರೆ, ಅಮ್ ಶಿಪೋರಾ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಮೂವರು ಉಗ್ರರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದ ನಂತರ, ಅವರ ಕುಟುಂಬದ ಸದಸ್ಯರು, ಅವರು ಕಾಣೆಯಾದ ಬಗ್ಗೆ ರಜೌರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮೂವರು ಯುವಕರ ಕುಟುಂಬದವರು ನಂತರ ಶೋಪಿಯಾನ್‌ಗೆ ತೆರಳಿ ವಿಷಯ ತಿಳಿದುಕೊಂಡಿದ್ದಾರೆ. ಆಗ ಅವರಿಗೆ ತಮ್ಮ ಮಕ್ಕಳು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವುದು ತಿಳಿದು ಬಂದಿದೆ. ತಮ್ಮ ಪುತ್ರರು ಕೆಲಸಕ್ಕಾಗಿ ಶೋಪಿಯಾನ್‌ಗೆ ತೆರಳಿದ್ದರು ಎಂದು ಪೊಲೀಸರಿಗೆ ಅವರು ಮಾಹಿತಿ ನೀಡಿದ್ದಾರೆ. ಬಳಿಕ ಮೂವರ ಡಿಎನ್ ಎ ಪರೀಕ್ಷೆ ನಡೆಸಿದಾಗ ಅದು ಅವರ ಕುಟುಂಬದ ಸದಸ್ಯರ ಡಿಎನ್ಎ ಜೊತೆ ಹೋಲಿಕೆಯಾಗಿದೆ.

ಈ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗುವುದು ಮತ್ತು ಮೂವರು ರಜೌರಿ ಕುಟುಂಬಗಳ ಹಕ್ಕುಗಳು ಸರಿಯೆಂದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು, ಸೇನೆ, ಮತ್ತು ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಜರ್ನಲ್ ಮನೋಜ್ ಸಿನ್ಹಾ ಭರವಸೆ ನೀಡಿದ್ದಾರೆ.
ಆಪರೇಷನ್ ಅಮ್ ಶಿಪೋರಾದಲ್ಲಿ ಕೊಲ್ಲಲ್ಪಟ್ಟ ಮೂವರು ಅಪರಿಚಿತ ‘ಭಯೋತ್ಪಾದಕರು’ ರಜೌರಿಯಿಂದ ಬಂದ ಇಮ್ತಿಯಾಜ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮಹಮ್ಮದ್ ಇಬ್ರಾರ್ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಸೇನೆಯ 15ನೆ ಕಾರ್ಪ್ಸ್ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

ಭದ್ರತಾ ಪಡೆಗಳು ಮೂವರು ಅಮಾಯಕ ಯುವಕರನ್ನು ಹತ್ಯೆ ಮಾಡಿದೆ. ಈ ಎನ್ ಕೌಂಟರ್ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಸಿಪಿಐ (ಎಂ) ಒತ್ತಾಯಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group