ವರದಿಗಾರ (ಸೆ.18) ಸ್ವಯಂ ಘೋಷಿತ ದೇವಮಾನವ ಭಕ್ತಿಭೂಷನ್ ಗೋವಿಂದ ಮಹಾರಾಜ್ ಸ್ವಾಮೀಜಿ ಆಶ್ರಮದಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಸಂತ್ರಸ್ತೆ ನ್ಯಾಯಾಲಯದಲ್ಲಿ ಪಾಟಿ ಸವಾಲಿನ ಸಂದರ್ಭದಲ್ಲಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿದ ಪ್ರಸಂಗ ಉತ್ತರ ಪ್ರದೇಶದ ಮುಜಫ್ಫರ್ ನಗರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಪೋಕ್ಸೊ ನ್ಯಾಯಾಲಯದಲ್ಲಿಂದು ನಡೆದಿದೆ.
ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯವು ಸೆಪ್ಟೆಂಬರ್ 25ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ.
ಜಿಲ್ಲೆಯ ಶುಕ್ರಾತಲ್ನಲ್ಲಿರುವ ಆಶ್ರಮದ ಮಾಲೀಕ, ಸ್ವಾಮಿ ಭಕ್ತಿ ಭೂಷಣ್ ಗೋವಿಂದ್ ಮಹಾರಾಜ್ ಅವರನ್ನು ಜುಲೈ 9 ರಂದು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಮತ್ತು ಅವರನ್ನು ಕಾರ್ಮಿಕರಾಗಿ ಕೆಲಸ ಮಾಡಲು ಒತ್ತಾಯಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ನ್ಯಾಯಾಲಯದಲ್ಲಿ ವಕೀಲರು, ಪಾಟೀ ಸವಾಲು ನಡೆಸುವಾಗ ಅಪ್ರಾಪ್ತ ವಯಸ್ಕಳಾಗಿರುವ ಸಂತ್ರಸ್ತೆ ಕುಸಿದುಬಿದ್ದ ನಂತರ ನ್ಯಾಯಾಧೀಶ ಸಂಜೀವ್ ಕುಮಾರ್ ತಿವಾರಿ ವಿಚಾರಣೆಯನ್ನು ಮುಂದೂಡಿದರು. ಸ್ವಯಂ ದೇವಮಾನವ ಭೂಷಣ್ ಮಹಾರಾಜ್ ಮತ್ತು ಆತನ ಶಿಷ್ಯ ಕ್ರಿಶನ್ ಮೋಹನ್ ದಾಸ್ ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು.
ಪೊಲೀಸರು ಈ ವಿಷಯದಲ್ಲಿ ಭೂಷಣ್ ಮತ್ತು ದಾಸ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ವಿಶೇಷ ವಕೀಲ ದಿನೇಶ್ ಶರ್ಮಾ ತಿಳಿಸಿದ್ದಾರೆ. ಹತ್ತು ಮಕ್ಕಳನ್ನು ಆಶ್ರಮದಿಂದ ರಕ್ಷಿಸಲಾಗಿದೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಅವರಲ್ಲಿ ಇಬ್ಬರು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎಂಬುದು ದೃಢಪಟ್ಟಿದೆ.
