ವರದಿಗಾರ (ಸೆ.18): ಭಯೋತ್ಪಾದನೆ-ಸಂಬಂಧಿತ ಸಂಸ್ಥೆಗಳಿಂದ ವಿದೇಶಿ ದೇಣಿಗೆ ಪಡೆಯುತ್ತಿದೆ ಎಂಬ ಸುದರ್ಶನ್ ಟಿವಿ ಮಾಡಿದ ಆರೋಪದ ಬಗ್ಗೆ ನಾಗರಿಕ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಎನ್ ಜಿಒ -ಝಕಾತ್ ಫೌಂಡೇಶನ್ ನಿಂದ ಸುಪ್ರೀಂ ಕೋರ್ಟ್ ಶುಕ್ರವಾರ ಪ್ರತಿಕ್ರಿಯೆ ಕೋರಿದೆ.
ಝಕಾತ್ ಫೌಂಡೇಶನ್ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ್ ಹೆಗ್ಡೆ, ಝಕಾತ್ ಫೌಂಡೇಶನ್ ಒಂದು ಸಾಮಾಜಿಕ ಸೇವೆಯನ್ನು ನಡೆಸುತ್ತಿರುವ ದತ್ತಿ ಸಂಸ್ಥೆಯಾಗಿದ್ದು, ಐಎಎಸ್ ತರಗತಿಗಳ ಶುಲ್ಕವನ್ನು ಮಾತ್ರ ಪಾವತಿಸುತ್ತಿದೆ ಎಂದು ಪೀಠದ ಗಮನಕ್ಕೆ ತಂದರು.
ಸುದರ್ಶನ್ ಟಿವಿ ಸಂಪಾದಕ ಸುರೇಶ್ ಚವಾಂಕೆ ಅವರು ತಮ್ಮ ಚಾನೆಲ್ ನ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಈ ಕಾರ್ಯಕ್ರಮದ ಪ್ರೋಮೋದಲ್ಲಿ “ಸರ್ಕಾರಿ ಸೇವೆಯಲ್ಲಿ ಮುಸ್ಲಿಮರನ್ನು ಒಳನುಸುಳುವ ಸಂಚು” ಅನ್ನು ಬಹಿರಂಗಪಡಿಸುವುದಾಗಿ ಹೇಳಲಾಗಿತ್ತು.
ಝಕಾತ್ ಫೌಂಡೇಶನ್ ವಿವಿಧ ಭಯೋತ್ಪಾದಕ-ಸಂಬಂಧಿತ ಸಂಸ್ಥೆಗಳಿಂದ ಹಣವನ್ನು ಪಡೆದುಕೊಂಡಿದೆ ಎಂದೂ ಚವಾಂಕೆ ಅಫಿದವಿತ್ ನಲ್ಲಿ ಹೇಳಿದ್ದರು. ಝಕಾತ್ ಫೌಂಡೇಶನ್ಗೆ ಕೊಡುಗೆ ನೀಡುವವರೆಲ್ಲರೂ ಭಯೋತ್ಪಾದಕ-ಸಂಬಂಧ ಹೊಂದಿದ್ದಾರೆ ಎಂದಲ್ಲ. ಆದಾಗ್ಯೂ, ಕೆಲವರು ಭಯೋತ್ಪಾದಕ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಅಥವಾ ಉಗ್ರಗಾಮಿ ಗುಂಪುಗಳಿಗೆ ಧನಸಹಾಯ ನೀಡುವ ಸಂಸ್ಥೆಗಳಾಗಿವೆ. ಝಕಾತ್ ಫೌಂಡೇಶನ್ ಪಡೆದ ಹಣವನ್ನು ಐಎಎಸ್, ಐಪಿಎಸ್ ಅಥವಾ ಯುಪಿಎಸ್ಸಿ ಆಕಾಂಕ್ಷಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಲು ಬಳಸಲಾಗುತ್ತದೆ ಎಂದು 91 ಪುಟಗಳ ಪ್ರಮಾಣಪತ್ರದಲ್ಲಿ ಸುರೇಶ್ ಚವಾಂಕೆ ಹೇಳಿದ್ದರು.
ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಇಂದೂ ಮಲ್ಹೋತ್ರಾ ಮತ್ತು ಕೆ ಎಂ ಜೋಸೆಫ್ ಅವರ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಚವಾಂಕೆ ಪರ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್, ಈ ಕಾರ್ಯಕ್ರಮವು ಮುಸ್ಲಿಂ ಸಮುದಾಯದ ದೇಣಿಗೆ ಮೂಲಗಳು ಮತ್ತು ಒಬಿಸಿ ಮೀಸಲಾತಿಯಂತಹ ಸಮಸ್ಯೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಸೆಪ್ಟೆಂಬರ್ 15 ರಂದು, ಸುಪ್ರಿಂಕೋರ್ಟ್ , ಸುದರ್ಶನ್ ಟಿವಿಯ ಕಾರ್ಯಕ್ರಮ ಮುಸ್ಲಿಂ ಸಮುದಾಯವನ್ನು “ಕೆಣಕುವ” ಉದ್ದೇಶ ಹೊಂದಿದ್ದು, ಅದರ ಉಳಿದ ಕಂತುಗಳ ಮೇಲಿನ ಪ್ರಸಾರ ಮಾಡದಂತೆ ತಡೆ ನೀಡಿತ್ತು.
