ವರದಿಗಾರ (ಸೆ.18): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ಕಾಡಿಬೇಡಿ ಕೊನೆಗೂ ಪ್ರಧಾನಿ ಮೋದಿ ಭೇಟಿಗೆ ಅವಕಾಶ ಪಡೆದಿದ್ದೀರಿ. ಈ ಅವಕಾಶವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳದೆ ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಕಡಕ್ ಆಗಿ ಕೇಳಲು ಬಳಸಿಕೊಳ್ಳಿ. ರಾಜ್ಯದ ಜನ ನಿಮ್ಮ ಬೆನ್ನ ಹಿಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ ವರ್ಷದ ಅತಿವೃಷ್ಟಿಗೆ ರೂ.35000 ಕೋಟಿ ಪರಿಹಾರ ಕೇಳಿದ್ದೀರಿ, ಆದರೆ ಪ್ರಧಾನಿ ಮೋದಿ ನೀಡಿದ್ದು ರೂ.1,869 ಕೋಟಿ. ಈ ಬಾರಿ ರೂ.8000 ಕೋಟಿ ನಷ್ಟವಾಗಿದೆ ಎಂದು ಹೇಳುತ್ತಿದ್ದೀರಿ. ಕಳೆದ ವರ್ಷದ ಬಾಕಿ ಜೊತೆ ಈ ವರ್ಷದ ಪರಿಹಾರವನ್ನು ಉದಾರವಾಗಿ ಕೊಡುವಂತೆ ಕೇಳಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
15ನೇ ಹಣಕಾಸು ಆಯೋಗದಿಂದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ನಷ್ಟವಾಗಿರುವುದು ಕರ್ನಾಟಕ ರಾಜ್ಯಕ್ಕೆ. ಈ ಅನ್ಯಾಯಕ್ಕೆ ಕಾರಣವಾಗಿರುವ ಮಾನದಂಡಗಳನ್ನು ಪರಿಷ್ಕರಿಸಿ ತೆರಿಗೆ ಹಂಚಿಕೆ ಮತ್ತು ಎಸ್ ಡಿ ಆರ್ ಎಫ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ದ ಪಾಲು ಸಿಗುವಂತೆ ಮಾಡಬೇಕು, ಕೊರೊನಾ ಸೋಂಕಿನಲ್ಲಿ ವಿಶ್ವದಲ್ಲಿ ಭಾರತ, ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಗೆಲುವಿನ ಕಿರೀಟಗಳನ್ನೆಲ್ಲ ಮುಡಿಗೇರಿಸುವ ನರೇಂದ್ರ ಮೋದಿ ತಮ್ಮ ವೈಫಲ್ಯಗಳ ಹೊಣೆಯನ್ನು ರಾಜ್ಯಗಳ ಹೆಗಲ ಕಡೆ ಜಾರಿಸುವ ಚಾಳಿ ಇದೆ. ಮೋದಿ ಅವರಿಗೆ ಜವಾಬ್ದಾರಿ ನೆನಪಿಸಿ ರಾಜ್ಯಕ್ಕೆ ನ್ಯಾಯ ಕೊಡಿಸಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕೊರೊನಾ ನಿಯಂತ್ರಣದ ಸಾಮಗ್ರಿ ಖರೀದಿಯನ್ನು ಕೇಂದ್ರೀಕೃತಗೊಳಿಸಿರುವ ಪ್ರಧಾನಿ ಮೋದಿ ಕರ್ನಾಟಕದ ಬೇಡಿಕೆಯ ಶೇಕಡಾ ಹತ್ತರಷ್ಟೂ ಪೂರೈಸಿಲ್ಲ. ವೆಂಟಿಲೇಟರ್ ಮತ್ತು ಆಮ್ಲಜನಕ ಪೂರೈಕೆಯ ಸಾಧನಗಳ ಕೊರತೆಯಿಂದ ಜನ ಸಾಯುತ್ತಿರುವುದನ್ನು ಗಮನಕ್ಕೆ ತಂದು ಪ್ರಧಾನಿ ಮೋದಿ ಅವರ ಕಣ್ಣು ತೆರೆಸಿ, ಮೋದಿ ಘೋಷಿಸಿದ್ದ ರೂ.20 ಲಕ್ಷ ಕೋಟಿ ಪ್ಯಾಕೇಜ್ ರಾಜ್ಯದ ಜನರನ್ನು ಇನ್ನೂ ತಲುಪಿಲ್ಲ. ಕೊರೊನಾ ಸೋಂಕಿಗಿಂತ ಹಸಿವು ಮತ್ತು ನಿರುದ್ಯೋಗದಿಂದ ಹೆಚ್ಚು ಜನ ಸಾವು-ನೋವಿಗೀಡಾಗುವ ಮೊದಲು, ಪ್ಯಾಕೇಜ್ ನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ಪಾಲು ನೀಡಲು ಒತ್ತಾಯಿಸಿ ಎಂದು ವಿರೋಧ ಪಕ್ಷದ ನಾಯಕ ಆಗ್ರಹಿಸಿದ್ದಾರೆ.
ನ್ಯಾಯಬದ್ಧವಾಗಿ ರಾಜ್ಯಕ್ಕೆ ನೀಡಬೇಕಾಗಿರುವ ಜಿಎಸ್ಟಿ ಪರಿಹಾರ ರೂ.25,508 ಕೋಟಿ ನೀಡದೆ ದ್ರೋಹ ಬಗೆದಿರುವ ಪ್ರಧಾನಿ ಮೋದಿ ಸಾಲ ಎತ್ತಲು ಯಡಿಯೂರಪ್ಪ ಕೈಗೆ ಭಿಕ್ಷಾಪಾತ್ರೆ ನೀಡಿದ್ದಾರೆ.
ಯಡಿಯೂರಪ್ಪ ಅವರೇ, ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯದೆ ಧೈರ್ಯದಿಂದ ಈ ಅನ್ಯಾಯ ಸರಿಪಡಿಸಲು ಹೇಳಿ ಎಂದು ಕುಟುಕಿದ್ದಾರೆ.
