ವರದಿಗಾರ (ಸೆ.17): ವಿವಾದಾತ್ಮಕ ಕೃಷಿ ಕ್ಷೇತ್ರದ ಮಸೂದೆಗಳ ಬಗ್ಗೆ ಲೋಕಸಭೆಯಲ್ಲಿ ಮತ ಚಲಾಯಿಸುವ ಗಂಟೆಗಳ ಮೊದಲು ಶಿರೋಮಣಿ ಅಕಾಲಿ ದಳದ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಯ ಮಿತ್ರ ಪಕ್ಷವಾಗಿರುವ ಅಕಾಲಿ ದಳಕ್ಕೆ ಪಂಜಾಬ್ ನಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೇಂದ್ರ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಆದರೂ ಅಕಾಲಿ ದಳ ಬಾಹ್ಯವಾಗಿ ಸರ್ಕಾರವನ್ನು ಬೆಂಬಲಿಸಲಿದೆ. ಆದರೆ “ರೈತ ವಿರೋಧಿ ರಾಜಕೀಯ” ವನ್ನು ವಿರೋಧಿಸಲಿದೆ ಎಂದು ಬಾದಲ್ ಅವರ ಪತಿ ಮತ್ತು ಪಕ್ಷದ ಮುಖ್ಯಸ್ಥ ಸುಖ್ಬೀರ್ ಬಾದಲ್ ಹೇಳಿದ್ದಾರೆ.
ಇದೊಂದು ನಾಟಕ ಸರಣಿಯ ಮುಂದುವರಿದ ಭಾಗ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಟೀಕಿಸಿದ್ದಾರೆ.
ಹರ್ಸಿಮ್ರತ್ ಅವರ ರಾಜೀನಾಮೆ ಕೂಡ ಪಂಜಾಬ್ನ ರೈತರನ್ನು ಮೋಸಗೊಳಿಸುವ ಗಿಮಿಕ್ ಆಗಿದೆ. ಅವರು (ಅಕಾಲಿಗಳು) ರೈತ ಸಂಘಟನೆಗಳನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಕ್ಯಾಪ್ಟನ್ ಹೇಳಿದ್ದಾರೆ.
