ವರದಿಗಾರ (ಸೆ.17) : ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟಗೊಳ್ಳಲು ಕೇವಲ 2 ವಾರಗಳಿರುವಾಗಲೇ , ಜಮೀನು ವಿವಾದದಲ್ಲಿ ಮುಸ್ಲಿಂ ಕಕ್ಷಿದಾರರಾದ ಇಕ್ಬಾಲ್ ಅನ್ಸಾರಿ ಗುರುವಾರ ಮಸೀದಿ ಧ್ವಂಸದ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ವಿಶೇಷ ಸಿಬಿಐ ನ್ಯಾಯಾಲಯ ಸೆಪ್ಟೆಂಬರ್ 30 ರಂದು ತನ್ನ ತೀರ್ಪು ಪ್ರಕಟಿಸಲು ನಿರ್ಧರಿಸಿದೆ. ಆರೋಪಿಗಳಾದ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳೀ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಮತ್ತು ವಿನಯ್ ಕಟಿಯಾರ್ ಸೇರಿದಂತೆ ಎಲ್ಲಾ 32 ಆರೋಪಿಗಳು ತೀರ್ಪು ಪ್ರಕಟವಾಗುವಾರ ನ್ಯಾಯಾಲಯದಲ್ಲಿ ಅಂದು ಹಾಜರಾಗಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ರಾಮಮಂದಿರ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್ ಇಡೀ ಜಮೀನು ನೀಡಿದೆ. ಅನೇಕ ಆರೋಪಿಗಳು ಈಗಾಗಲೇ ಸಾವನ್ನಪ್ಪಿದ್ದಾರೆ. ಹೆಚ್ಚಿನ ಆರೋಪಿಗಳು ವೃದ್ಧಾಪ್ಯದಲ್ಲಿರುವುದರಿಂದ ಅವರಿಗೆ ಈ ಸಮಯದಲ್ಲಿ ಶಿಕ್ಷೆ ವಿಧಿಸುವುದು ಸೂಕ್ತವಲ್ಲ ಸರಿಯಲ್ಲ ಎಂದು ಇಕ್ಬಾಲ್ ಅನ್ಸಾರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದೂ ಅವರು ಮನವಿ ಮಾಡಿದ್ದಾರೆ.
‘ಅಯೋಧ್ಯೆ ವಿಷಯವು ಈ ಹಿಂದೆ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ವಿವಾದವಾಗಿ ಮಾರ್ಪಟ್ಟಿತ್ತು. ಆದರೆ ಐತಿಹಾಸಿಕ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಸದ್ಯ, ಈ ವಿಷಯಕ್ಕೆ ತಿಲಾಂಜಲಿ ಹಾಡಬೇಕು. ಎರಡೂ ಸಮುದಾಯಗಳು ತಮ್ಮ ನಡುವಿನ ವಿವಾದವನ್ನು ಕೊನೆಗೊಳಿಸಬೇಕು. ದೇಶದ ಉನ್ನತಿಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದ್ದಾರೆ.
